26ರಿಂದ ಎರಡು ದಿನ ಬೆಳಗಾವಿಯಲ್ಲಿ ಸಿರಿಧಾನ್ಯ ಮತ್ತು ಸಾವಯವ ಮೇಳ : ಜಿಲ್ಲಾಧಿಕಾರಿ ನಿತೇಶ ಪಾಟೀಲ
ಬೆಳಗಾವಿ : 2023ನೇ ವರ್ಷವನ್ನು “ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ” ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದೊಂದಿಗೆ ಇದೇ ದಿ. 26 ಮತ್ತು 27ರಂದು ಸರದಾರ ಹೈಸ್ಕೂಲ ಮೈದಾನದಲ್ಲಿ “ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ ಪಾಟೀ ಅವರು ಇಂದಿಲ್ಲಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಬೆಳಗಾವಿಯಲ್ಲಿ ಬೃಹತ್ ಸಿರಿಧಾನ್ಯ ಮತ್ತು ಸಾವಯವ ಮೇಳ ಇದರ ಮುಖ್ಯ ಉದ್ದೇಶವೆನೇಂದರೆ ಇತ್ತೀಚಿನ ಯುಗದಲ್ಲಿ ಝಂಕ್ ಫುಡ್‍ಗಳನ್ನು ಸೇವಿಸುವುದರಿಂದ ಸಾಕಷ್ಟು ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಸಿರಿಧಾನ್ಯಗಳಾದ ನವಣೆ, ಕೊರಲೆ, ಊದಲು, ಹಾರಕ, ಬರಗು, ರಾಗಿ, ಸಜ್ಜೆ ಮತ್ತು ಜೋಳದಿಂದ ತಯಾರಿಸಿದ ಆಹಾರಗಳನ್ನು ತಿಂದಾಗ ಮನುಷ್ಯ ಸದೃಢವಾಗಿ ಸಶಕ್ತವಾಗಿ ಆರೋಗ್ಯದಿಂದ ಇರಲು ಸಾದ್ಯವಾಗುತ್ತದೆ. ಅಲ್ಲದೆ, ಜನರಿಗೆ ಈ ಸಿರಿಧಾನ್ಯಗಳಲ್ಲಿ ಇರುವ ಪೌಷ್ಠಿಕಾಂಶ, ಅವುಗಳ ಸಂಸ್ಕರಣೆ ಮೌಲ್ಯವರ್ಧನೆ ಮಾಡಲು ತಿಳಿಸುವುದು ಹಾಗೂ ರೈತರನ್ನು ಸಿರಿಧಾನ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಉದ್ಯಮಶೀಲರನ್ನಾಗಿ ಮಾಡುವುದು ಅತ್ಯಂತ ಅವಶ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ನುಡಿದರು.
ಈ ಮೇಳದ ಪ್ರಯುಕ್ತ ಜನರ ಆರೋಗ್ಯಯುತ ಬದುಕಿಗಾಗಿ ದಿ. 24ರಂದು ಬೆಳಿಗ್ಗೆ 6.30 ನಗರದ ಚೆನ್ನಮ್ಮ ವೃತ್ತದಿಂದ “ಸಿರಿಧಾನ್ಯ ನಡಿಗೆ” ಹಮ್ಮಿಕೊಳ್ಳಲಾಗಿದೆ. ಮತ್ತು ಸಾಯಂಕಾಲ 4 ಗಂಟೆಗೆ “ಸೈಕಲ್ ಜಾತಾ” ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕೆಎಲ್‍ಇ ಹೊಟೇಲ್ ಮ್ಯಾನೇಜ್‍ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು, ಕ್ರೀಡಾ ವಿದ್ಯಾರ್ಥಿಗಳು, ಡಾಕ್ಟರ್ ಕ್ಲಬ್, ಲಾಯನ್ಸ್ ಕ್ಲಬ್, ವಕೀಲರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಯವರು ಹಾಗೂ ಗಣ್ಯರು ಭಾಗವಹಿಸುತ್ತಾರೆ ಎಂದು ನುಡಿದರು.
ಅದೇ ರೀತಿ ದಿ. 24ರಂದು 3 ರಿಂದ 4 ಗಂಟೆಗೆ ಧಾನ್ಯಗಳ ರಂಗೋಲಿ ಸ್ಪರ್ಧೆಯನ್ನು ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ರೈತರ ತರಬೇತಿ ಕೇಂದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ದಿ. 25ರಂದು ಬೆಳಿಗ್ಗೆ 6.30 ಗಂಟೆಗೆ ಚೆನ್ನಮ್ಮ ವೃತ್ತದಿಂದ “ಸೈಕಲ್ ಜಾತಾವನ್ನು ” ಹಮ್ಮಿಕೊಳ್ಳಲಾಗಿದೆ. 26ರಂದು ಬೆಳಿಗ್ಗೆ 11 ಗಂಟೆಗೆ “ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು” ಜಿಲ್ಲಾ ಉಸ್ತುವರಿ ಸಚಿವ ಗೋವಿಂದ ಕಾರಜೋಳ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
26 ಹಾಗೂ 27 ಎರಡು ದಿನಗಳ ಕಾಲ ಜರಗುವ ಈ ಮೇಳದಲ್ಲಿ 75ರಿಂದ 80 ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ. ಅದರಲ್ಲಿ ಸಿರಿಧಾನ್ಯ ಮತ್ತು ಸಾವಯವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಉತ್ಪಾದನ ಪ್ರದರ್ಶನ ಹಾಗೂ ಮಾರಾಟ. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳ ಸ್ಪರ್ಧೆ. Pಒಈಒಇ ಯೋಜನೆಯ ಫಲಾನುಭವಿಗಳ ಯಶೋಗಾಧೆಗಳೊಂದಿಗೆ ಅವರು ತಯಾರಿಸಿದ ಉತ್ಪನ್ನದ ಮಾರಾಟ ಮಳಿಗೆಗಳು ಮೇಳದ ವೈಶಿಷ್ಟತೆಗಳಾಗಿವೆ.ಇದಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ "ಕೃಷಿ ಜ್ಞಾನ ಭಂಡಾರ" ಎಂಬ ವಿಶೇಷ ಮಳಿಗೆಯನ್ನು ಹಾಕಿ ಅದರಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿಸಿದ ಮಾದರಿಗಳನ್ನು ಬಿತ್ತರಿಸಲಾಗುವುದು.
ಕೃಷಿಯಲ್ಲಿ ಡ್ರೋಣ್ ಬಳಕೆಯ ಪ್ರಾತ್ಯಕ್ಷಿಕೆಯನ್ನು ಕೂಡ ನೀಡಲಾಗುವುದು ರೈತರಿಗೆ ಸಿರಿಧಾನ್ಯ, ಸಾವಯವ, ಆಹಾರದಲ್ಲಿ ಆರೋಗ್ಯ ಮತ್ತು ಮಣ್ಣಿನ ಆರೋಗ್ಯ ಹಾಗೂ ಇನ್ನಿತರ ವಿಷಯಗಖ ಕುರಿತು ಕೃಷು ವಿಶ್ವವಿದ್ಯಾಲಯ, ಧಾರವಾಡದ ವಿಜ್ಞಾನಿಗಳಿಂದ ಹಾಗೂ ಪ್ರಗತಿಪರ ರೈತರಿಂದ ವಿಷಯ ಮಂಡನೆ ಮತ್ತು ರೈತರೊಂದಿಗೆ ಚರ್ಚಾಗೋಷ್ಠಿ ನಡೆಸಲಾಗುವುದು. ಇದರೊಂದಿಗೆ ಜ.26 ರಂದು ಸಂಜೆ ಸಾಂಸ್ಕೃತಿಕ ಮೇಳ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿರಿಧಾನ್ಯ ಹಾಗೂ ಸಾವಯವ ಮೇಳದ ಪ್ರಚಾರಸಾಮಗ್ರಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬಿಡುಗಡೆಗೊಳಿಸಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಉಪ ಕೃಷಿ ನಿರ್ದೇಶಕರಾದ ಎಸ್.ಬಿ.ಕೊಂಗವಾಡ, ಶ್ರೀಮತಿ ಹೂಗಾರ್, ಚಿಕ್ಕೋಡಿಯ ಕೃಷಿ ಉಪ ನಿರ್ದೇಶಕರಾದ ಎಲ್.ಐ.ರೂಢಗಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.