ಯರಗಟ್ಟಿಯಲ್ಲಿ ಬಸವ ಪಂಚಮಿ ಆಚರಣೆ: ರೋಗಿಗಳಿಗೆ ಹಾಲು ವಿತರಣೆ
ಯರಗಟ್ಟಿ 18 : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆದೇಶದಂತೆ ಸ್ಥಳೀಯ ಬಸವ ಅಭಿಮಾನಿಗಳು ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಆಶ್ರಯದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಸವ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ನಾಗರ ಪಂಚಮಿ ಸಂದರ್ಭದಲ್ಲಿ ಕಲ್ಲುನಾಗರಗಳಿಗೆ ಹಾಗೂ ಮಣ್ಣಿನ ಹುತ್ತಗಳಿಗೆ ಹಾಲು ಸುರಿದು ವ್ಯರ್ಥ ಮಾಡದೆ, ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಬ್ರೆಡ್ ಹಾಗೂ ಬಿಸ್ಕಿಟ್ ವಿತರಿಸುವ ಮೂಲಕ ಬಸವ ಪಂಚಮಿಯನ್ನು ಜನಪರವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ರಫೀಕ್ ಡಿಕೆ, ಲಿಂಗಾಯತ ಧರ್ಮಗುರು ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಸ್ಮರಣಾರ್ಥ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು. ಹುತ್ತ, ಹಾವುಗಳಿಗೆ ಹಾಲು ಸುರಿಯುವ ಬದಲು ಆಸ್ಪತ್ರೆಯ ರೋಗಿಗಳು ಹಾಗೂ ಮಕ್ಕಳಿಗೆ ಹಾಲು ವಿತರಿಸುವುದು ಹೆಚ್ಚು ಮಾನವೀಯ ಕಾರ್ಯವಾಗಿದೆ ಎಂದು ಹೇಳಿದರು. ಮೂಢನಂಬಿಕೆಗಳನ್ನು ತೊರೆದು ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಸಚಿನ್ ಬೂದಿ, ಲಕ್ಷ್ಮಣ ಕುಕಟೂರ್ಪಗೋಳ, ಸೋಮು ರೈನಾಪುರ, ಸುನೀತಾ ಗಿರೇಮಗೋವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.