ಬಾಂಗ್ಲಾದೇಶ: ನಟಿ ಪೊರಿ ಮೋನಿ ನಿವಾಸಕ್ಕೆ ದಾಳಿ, ಬಂಧನದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ!
ಢಾಕಾ, ಆಗಸ್ಟ್ 05 ನೆರೆಯ ಬಾಂಗ್ಲಾದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ನಟಿಯೊಬ್ಬಾಕೆಯ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಆಕೆಯ ಬಂಧನದ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಿದೆ.
ಬಾಂಗ್ಲಾದೇಶದ ಭಯೋತ್ಪಾದನಾ ವಿರೋಧಿ, ಅಪರಾಧ ತಡೆ ವಿಶೇಷ ದಳ ಆರ್‌ಎಬಿ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ ಸಿನಿಮೀಯ ಮಾದರಿಯಲ್ಲಿ 28 ವರ್ಷ ವಯಸ್ಸಿನ ನಟಿ ಪೊರಿ ಮೋನಿ ಅಲಿಯಾಸ್ ಸ್ಮೃತಿ ಶ್ಯಾಮಸುನ್ನಹರ್ ಅವರನ್ನು ಬಂಧಿಸಿದೆ.
ಬಾಂಗ್ಲಾದೇಶದ ಪ್ರಖ್ಯಾತ ನಟಿಯಾಗಿರುವ ಈಕೆ, ಹಲವು ಸಿನಿಮಾ, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ನಟಿ ಸೆಲೆಬ್ರಿಟಿ. ನಟಿಯು ಉದ್ಯಮಿಯೊಬ್ಬರ ಮೇಲೆ ಆರೋಪ ಮಾಡಿದ ಬೆನ್ನಲ್ಲೆ ಈ ಬಂಧನವಾಗಿರುವುದು ಚರ್ಚೆಗೆ ಕಾರಣವಾಗಿದೆ.
ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರ್‌ಎಬಿ ಮೇಝರ್ ರೊಯಿಸುಲ್ ಅಜಮ್, ''ನಟಿ ಮೊನಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಹಣ ಮಾಡುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ನಾವು ದಾಳಿ ನಡೆಸಿದ್ದೇವೆ. ಫರಿಯಾ ಮಹಬೂಬ್ ಹಾಗೂ ಮೋವು ಅಖ್ತರ್ ಎಂಬ ಇನ್ನಿಬ್ಬ ಮಾಡೆಲ್‌ಗಳನ್ನು ಸಹ ಬಂಧಿಸಲಾಗಿದ್ದು, ಇವರು ಸಿರಿವಂತರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕಿಸುವ ದಂಧೆ ನಡೆಸುತ್ತಿದ್ದರು'' ಎಂದಿದ್ದಾರೆ.
ಪೊರಿ ಮೊನಿ ಕೆಲವು ದಿನಗಳ ಹಿಂದಷ್ಟೆ ಕೆಲವರ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಯತ್ನದ ಆರೋಪ ಮಾಡಿದ್ದರು. ಅದಾದ ಕೆಲವು ದಿನಗಳ ಬಳಿಕ ಈಗ ನಟಿಯನ್ನು ಬಂಧಿಸಲಾಗಿದೆ. ನಟಿಯನ್ನು ಬಂಧಿಸುವ ಮೊದಲು ಇಬ್ಬರು ಮಾಡೆಲ್‌ಗಳನ್ನು ಬಂಧಿಸಿದ್ದು ಇವರದ್ದೆಲ್ಲ ಒಂದೇ ಗುಂಪು ಎಂದು ಪೊಲೀಸರು ಹೇಳಿದ್ದಾರೆ.
ಆರ್‌ಎಬಿ ತಂಡವು ಢಾಕಾದ ಹೊರ ವಲಯದಲ್ಲಿರುವ ಪೊರಿ ಮೊನಿಯ ಮನೆಯ ಮೇಲೆ ದಾಳಿ ಮಾಡಲು ಹೋದಾಗ ತನ್ನೊಂದಿಗೆ ಟಿವಿ ಸುದ್ದಿವಾಹಿನಿಯವರನ್ನು ಕರೆದುಕೊಂಡು ಹೋಗಿದೆ. ದಾಳಿಯನ್ನು ಟಿವಿಯಲ್ಲಿ ಲೈವ್ ಆಗಿ ಪ್ರಸಾರವಾಗುವಂತೆ ಮಾಡಿ, ಲೈವ್‌ನಲ್ಲಿಯೇ ನಟಿಯನ್ನು ಬಂಧಿಸಿ ಕರೆದೊಯ್ಯಲಾಗಿದೆ.
ನಟಿ ಪೊರಿ ಮೊನಿ ಕೆಲವು ದಿನಗಳ ಹಿಂದಷ್ಟೆ ಅತ್ಯಾಚಾರ ಹಾಗೂ ಕೊಲೆ ಯತ್ನದ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಉದ್ಯಮಿ ನಾಸಿರುದ್ದೀನ್ ಮೊಹಮ್ಮದ್ ಸೇರಿದಂತೆ ಒಬ್ಬ ಫುಟ್‌ಬಾಲ್ ಆಟಗಾರ, ವಿದ್ಯಾರ್ಥಿ ಸಂಘಟನೆ ಮುಖಂಡ ಮತ್ತಿಬ್ಬರನ್ನು ಬಂಧಿಸಲಾಗಿತ್ತು. ಅವರಿಗೆ 18 ದಿನದ ಜೈಲು ವಾಸದ ಬಳಿಕ ಜಾಮೀನು ನೀಡಲಾಗಿದೆ.