ಬ್ಯಾಡ್ಮಿಂಟನ್: ಬಂಗಾರಕ್ಕೆ ಸಿಂಧು ಇನ್ನು ಎರಡೇ ಹೆಜ್ಜೆ
ಟೋಕಿಯೊ, ಜು.30 - ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ 2020ರ ಒಲಿಂಪಿಕ್ಸ್ ಕ್ರೀಡಾಕೂಟದ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-13, 22-20 ರಿಂದ ಜಪಾನ್ ನ ಅಕಾನೆ ಯಮಾಗುಚಿ ವಿರುದ್ಧ ಭರ್ಜರಿ ಜಯ ಸಾಧಿಸಿ, ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.
ಆರಂಭದಲ್ಲಿ ಆತಿಥೇಯ ಆಟಗಾರ್ತಿ ಮುನ್ನಡೆ ಸಾಧಿಸಿದರು. ಆದರೆ ಇವರ ಮಂದಹಾಸ ಬಹಳ ಹೊತ್ತು ನಿಲ್ಲಲಿಲ್ಲ. ಸಿಂಧು ಅಂಕಗಳನ್ನು ಕಲೆ ಹಾಕಿ ಮುನ್ನಡೆ ತಮ್ಮದಾಗಿಸಿಕೊಂಡರು. ಇಲ್ಲಿಂದ ಹಿಂದಿರುಗಿ ನೋಡದ ಸಿಂಧು ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು. ಅಲ್ಲದೆ 11-7 ರಿಂದ ಗೇಮ್ ಗೆಲ್ಲುವ ಭರವಸೆ ಮೂಡಿಸಿದರು. 15-11 ಆಗಿದ್ದಾಗ ಸಿಂಧು ಮನಮೋಹಕ ಆಟದ ಪ್ರದರ್ಶನ ನೀಡಿ, ಸತತ ಅಂಕ ಕಲೆ ಹಾಕಿ ಗೇಮ್ ಸುಲಭವಾಗಿ ಗೆದ್ದರು.
ಎರಡನೇ ಗೇಮ್ ನ ಆರಂಭದಲ್ಲಿ ಸಿಂಧು ಮುನ್ನಡೆ ಕಾಯ್ದುಕೊಂಡರೆ, ಎರಡನೇ ಗೇಮ್ ನಲ್ಲೂ ಸಿಂಧು 11-6 ರಿಂದ ಮೊದಲಾವಧಿಯಲ್ಲಿ ಜಯ ಸಾಧಿಸಿದರು. 15-11 ರಿಂದ ಮುನ್ನಡೆ ಸಾಗುತ್ತಿದ್ದ ವೇಳೆ ಜಪಾನ್ ನ ಯಮಾಗುಚಿ ಸತತ ಐದು ಅಂಕ ಕಲೆ ಹಾಕಿ ಪುಟಿದೇಳುವ ಭರವಸೆ ಮೂಡಿಸಿದರು. ಸಿಂಧು 19-20 ರಿಂದ ಹಿನ್ನಡೆ ಅನುಭವಿಸಿದರೂ, ದೃತಿ ಗೆಡದೆ ಸತತ ಮೂರು ಅಂಕ ಕಲೆ ಹಾಕಿ ಮಿಂಚಿದರು.