ಬ್ಯಾಡ್ಮಿಂಟನ್: ಸಿಂಧು ಕ್ವಾರ್ಟರ್ ಗೆ
ಜು.29 - ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು 2020ರ ಟೋಕಿಯೊ ಒಲಿಂಪಿಕ್ಸ್ ನ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸಿಂಧು 21-15, 21-13 ರಿಂದ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫೆಲ್ಟ್ ವಿರುದ್ಧ 41 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು.
ಆರಂಭದಲ್ಲಿ ಡೆನ್ಮಾರ್ಕ್ ಆಟಗಾರ್ತಿ 2-0 ಮುನ್ನಡೆ ಸಾಧಿಸಿದ್ದರು. ಈ ಹಂತದಲ್ಲಿ ಸಿಂಧು ಎಚ್ಚರಿಕೆಯ ಆಟವಾಡಿ ಸತತ 4 ಅಂಕಗಳನ್ನು ಗಳಿಸಿದರು. ಈ ಗೇಮ್ ನಲ್ಲಿ ಮಿಯಾ ಅಂಕಗಳಿಸಿ ಸಿಂಧುಗೆ ಪೆಟ್ಟು ನೀಡುವ ಆಸೆ ಫಲಿಸಲಿಲ್ಲ. ಕೊನೆಯ ಕ್ಷಣದ ವರೆಗೂ ಸೊಗಸಾದ ಪ್ರದರ್ಶನ ನೀಡಿದ ಸಿಂಧು 22 ನಿಮಿಷಗಳಲ್ಲಿ ಮೊದಲ ಗೇಮ್ ಗೆದ್ದು ಬೀಗಿದರು.
ಎರಡನೇ ಗೇಮ್ ನ ಆರಂಭದಲ್ಲೇ ಸಿಂಧು 5-0 ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಎದುರಾಳಿ ಆಟಗಾರ್ತಿಯ ರಣ ತಂತ್ರವನ್ನು ಅರಿತು ಆಡಿದ ಭಾರತದ ಆಟಗಾರ್ತಿ ಉತ್ತಮ ಸ್ನ್ಯಾಷ್ ಹಾಗೂ ಗ್ಯಾಪ್ ಶಾಟ್ ಗಳನ್ನು ಪ್ರಯೋಗಿಸಿ ಅಂಕಗಳನ್ನು ಕೊಳ್ಳೆ ಹೊಡೆದರು. ಪರಿಣಾಮ ಎರಡನೇ ಗೇಮ್ ನ್ನು 19ನೇ ನಿಮಿಷದಲ್ಲಿ ಜಯಿಸಿ ಮುನ್ನಡೆದರು.