ಬಿಜೆಪಿ ಶಾಸಕ ಸಿದ್ದು ಸವದಿ ಸ್ಪರ್ಧೆಗೆ ತೀವ್ರ ವಿರೋಧ
ಸ್ಥಳೀಯ-ನೇಕಾರರಿಗೆ ಟಿಕೇಟ್ ನೀಡಿ ಇಲ್ಲವಾದರೆ ವಿಷ ಸೇವನೆ : ರಾಜೇಂದ್ರ ಅಂಬಲಿ
ರಬಕವಿ-ಬನಹಟ್ಟಿ 06: ತೇರದಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ನೇಕಾರ ಅಥವಾ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಇಲ್ಲವಾದಲ್ಲಿ ವಿಷ ಹಾಗೂ ನೇಣು ಕುಣಿಕೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ತೇರದಾಳ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ ಹೇಳಿದ್ದಾರೆ.
ಬಿಜೆಪಿ ವರಿಷ್ಠರು ಸಭೆ ನಡೆಸುತ್ತಿರುವ ಬೆಂಗಳೂರಿನ ನೆಲಮಂಗಲದ ಗೋಲ್ಡನ್ ರೆಸಾರ್ಟ್ದ ಮುಂಭಾಗದಲ್ಲಿ ವಿಷದ ಬಾಟಲಿ ಹಾಗೂ ಬಿಜೆಪಿ ಚಿಹ್ನೆಯಿರುವ ನೇಣು ಕುಣಿಕೆ ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿಯವರು ಗೆಲವಿಗೆ ಕಾರಣರಾಗಿರುವ ನೇಕಾರ ಸಮುದಾಯವನ್ನು ಕಡೆಗಣಿಸಿದ್ದಾರಲ್ಲದೆ, ನೇಕಾರರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನೇಕಾರರರೆ ಹೆಚ್ಚಾಗಿರುವುದರಿಂದ ನಿರ್ಣಾಯಕ ಮತದಾರರಾಗಿದ್ದಾರೆ. ಸ್ಥಳೀಯರಿಗೆ ಹಾಗೂ ನೇಕಾರರಿಗೆ ಟಿಕೇಟ್ ನೀಡಬೇಕೆಂಬುದು ಬಹುವರ್ಷಗಳ ಕನಸಾಗಿದ್ದು, ತೇರದಾಳ ಕ್ಷೇತ್ರ ನೂತನವಾಗಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅನೇಕರು ಸ್ಥಳೀಯರು ಹಾಗೂ ನೇಕಾರರು ಟಿಕೇಟ್ ಆಕಾಂಕ್ಷಿಗಳಾಗಿದ್ದರೂ ಬಿಜೆಪಿ ವರಿಷ್ಠರು ಸ್ಥಳೀಯರಿಗೆ ಇಲ್ಲಿಯವರೆಗೆ ಟಿಕೇಟ್ ನೀಡಿಲ್ಲ. ಈ ಸಲ ನೇಕಾರರ ಸಮುದಾಯಕ್ಕೆ ಮನ್ನಣೆ ನೀಡಬೇಕು. ಇಲ್ಲವಾದರ ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ. ಇದಕ್ಕೆ ಬಿಜೆಪಿಯವರೆ ಹೊಣೆಗಾರರಾಗುತ್ತಾರೆ ಎಂದರು.
ಕ್ಷೇತ್ರದಲ್ಲಿ ಅನೇಕರು ಟಿಕೇಟ್ ಆಕಾಂಕ್ಷಿಗಳಾಗಿದ್ದು, ಅವರಲ್ಲಿ ಸ್ಥಳೀಯರಿಗೆ ಹಾಗೂ ನೇಕಾರರ ಸಮುದಾಯಕ್ಕೆ ಸೇರಿದ ಯಾರಿಗಾದರೂ ಟಿಕೇಟ್ ನೀಡಿದಲ್ಲಿ ಬಿಜೆಪಿಯ ಗೆಲುವು ಕಟ್ಟಿಟ್ಟ ಬುತ್ತಿ, ಸ್ಥಳೀಯರಿಗೆ ಬಿಜೆಪಿ ಮನ್ನಣೆ ನೀಡಿದರೆ ಸುಲಭವಾಗಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಒಂದು ವೇಳೆ ಹಾಲಿ ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ನೀಡಿದರೆ ಸೋಲು ಸೂರ್ಯ ಪ್ರಕಾಶದಷ್ಟೇ ಸತ್ಯವಾಗುತ್ತದೆ ಎಂದು ತಿಳಿಸಿದರು. ನ್ಯಾಯವಾದಿ ಕಿರಣಕುಮಾರ ದೇಸಾಯಿ, ಬಸವರಾಜ ಬಾಳಿಕಾಯಿ, ಪ್ರವೀಣ ಕೋಲಾರ, ಕುಮಾರ ಕದಮ, ಉದಯಕುಮಾರ ದೇಸಾಯಿ, ಮಲ್ಲು ಸವದಿ ಸೇರಿದಂತೆ ತೇರದಾಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.