ಕಾನೂನು ಅರಿವು, ಮಾನವ ಹಕ್ಕು, ಲಿಂಗ ಸಮಾನತೆ ಕುರಿತು ಜಾಗೃತಿ ಕಾರ್ಯಕ್ರಮ
ಮುಂಡಗೋಡ:ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಮಾನವ ಹಕ್ಕುಗಳ ಸಂರಕ್ಷಣೆ ಕೇಂದ್ರ ಧಾರವಾಡ ಮತ್ತು ಮಹಿಳಾ ಸಾಂತ್ವನ ಕೇಂದ್ರ ಮಂಡಳದ ವತಿಯಿಂದ ಪಟ್ಟಣದ ಆದಿಜಾಂಭವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು, ಮಾನವ ಹಕ್ಕುಗಳು, ಲಿಂಗ ಸಮಾನತೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಪಿಎಸ್ಐ ಮಹೇಶ ಮಾಳಿ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, ಪೋಕ್ಸೋ ಕಾಯ್ದೆ, ಶಿಕ್ಷಣದ ಸವಲತ್ತುಗಳು ಮತ್ತು ಬಾಲಾಪರಾಧ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಸಾಧನಾ ಸಂಸ್ಥೆಯ ಸಂಸ್ಥಾಪಕಿ ಡಾ.ಇಸಬೆಲ್ಲಾ ಜೇವಿಯರ್ ಹೆಣ್ಣುಮಕ್ಕಳು ಎದುರಿಸುವ ಸವಾಲುಗಳು, ಬಾಲ್ಯ ವಿವಾಹ, ಲಿಂಗ ಸಮಾನತೆ, ಹೆಣ್ಣು ಭ್ರೂಣ ಹತ್ಯೆ ಮತ್ತು ಮಹಿಳಾ ಶಿಕ್ಷಣದ ಅಗತ್ಯತೆ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಶಿಕ್ಷಕ ಎಸ್.ಡಿ.ಮುಡೆಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲಿಸಬೇಕು. ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ತಂದೆ-ತಾಯಿ ಮತ್ತು ಗುರು-ಹಿರಿಯರನ್ನು ಗೌರವಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಆದಿಜಾಂಭವ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಚೈತ್ರಾ ಕೊರವರ ಪ್ರಾರ್ಥಿಸಿದರು. ಸಹ ಶಿಕ್ಷಕ ರವಿ ಅಕ್ಕಿವಳ್ಳಿ ನಿರೂಪಿಸಿದರು. ಎಂ.ಎಸ್.ಪಾಟೀಲ ವಂದಿಸಿದರು. ಸಾಧನಾ ಸಂಸ್ಥೆಯ ಬೀಬಿಅಮೀನಾ ಅಂಬುರೆ ಇದ್ದರು.