ಕರಿಮಸೂತಿ ಕಾಲುವೆಯಲ್ಲಿ ಶವ ಪತ್ತೆ ಪ್ರಕರಣ : 4 ದಿನದಲ್ಲಿ ಹತ್ಯೆಯ ಕೇಸ್ ಭೇದಿಸಿದ ಐಗಳಿ ಪೊಲೀಸರ ಕಾರ್ಯಕ್ಕೆ ಎಸ್.ಪಿ ಸಂಜೀವ ಪಾಟೀಲ ಮೆಚ್ಚುಗೆ
ಬೆಳಗಾವಿ, ಜು, 29 : ಜಿಲ್ಲೆಯ ಅಥಣಿ ತಾಲೂಕಿನ ಕರಿಮಸೂತಿ ಕಾಲುವೆಯಲ್ಲಿ ಇತ್ತಿಚೇಗೆ ಶವವಾಗಿ ಪತ್ತೆಯಾದ ವ್ಯಕ್ತಿಯ ಹತ್ಯೆಯ ಪ್ರಕರಣವನ್ನು ಕೇವಲ ನಾಲ್ಕು ದಿನಗಳಲ್ಲಿ ಭೇದಿಸುವಲ್ಲಿ ಐಗಳಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 24ರಂದು ಅಥಣಿ ತಾಲೂಕಿನ ಯಂಕಚ್ಚಿ ಗ್ರಾಮದಲ್ಲಿ ಕರಿಮಸೂತಿ ಕಾಲುವೆಯ ನೀರಲ್ಲಿ ಒಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಬಸಪ್ಪ ಹೊಕ್ಕುಂಡಿ ಎಂಬುವವರು ಐಗಳಿ ಪೊಲೀಸರಿಗೆ ದೂರು ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ್ದ ಐಗಳಿ ಪೊಲೀಸರು ಪರಿಶೀಲನೆ ನಡೆಸಿದ್ದರು. ತಲೆಯ ಹಿಂದಿನ ಭಾಗಕ್ಕೆ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಮೃತನ ಕೈ ಮೇಲೆ ವಿಠ್ಠಲ ಮತ್ತು ಮೇಲೊಡಿ ಚಿಹ್ನೆ, ಇಂಗ್ಲೀಷ ಅಕ್ಷರದಲ್ಲಿ ಎಜೆ ಅಂತಾ ಹಂಚಿ ಹಾಕಿಸಲಾಗಿತ್ತು. ಕೈಮೇಲಿನ ಹಂಚಿ ಬಗ್ಗೆ ಜಾಡು ಹಿಡಿದ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ರಚಿಸಲಾಗಿತ್ತು.
ಹತ್ಯೆಯ ಬಗ್ಗೆ ಪೊಲೀಸ್ ತನಿಖಾ ತಂಡವು ಜಾಡು ಹಿಡಿದು ಹೋದಾಗ ಕೊಲೆಯಾದ ವ್ಯಕ್ತಿ ವಿಠ್ಠಲ ತುಕಾರಾಮ ಬನ್ನೆಣ್ಣವರ (21), ಹಾಲಿ ಉಗಾರ ಬಿ,ಕೆ, ಮೂಲತಃ ಮಹಾರಾಷ್ಟ್ರ ರಾಜ್ಯದ ಗುಗವಾಡ ಎಂಬುದು ಗೊತ್ತಾಗಿದೆ. ಮೃತನ ಮತ್ತು ಆರೋಪಿತರ ಹಿನ್ನೆಲೆಯನ್ನು ಗುಪ್ತವಾಗಿ ಸಂಗ್ರಹಿಸಿದ ಪೊಲೀಸರ ತಂಡ ನಾಲ್ಕೆ ದಿನಗಳಲ್ಲಿಯೇ ಮೃತನನ್ನು ಮತ್ತು ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕೊಲೆ ಮಾಡಿದ ಆರೋಪಿ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಇಬ್ಬರನ್ನು ಉಗಾರ ಬುದ್ರುಕದಲ್ಲಿ ಬಂದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಹಾಗು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೃತನ ಮೇಲಿನ ಹಳೆಯ ವೈಯಕ್ತಿಕ ದ್ವೇಷದ ಹಾಗೂ ಹಳೇ ವೈಷಮ್ಯದಿಂದ ಈ ಹತ್ಯೆ ಮಾಡಿರುವುದಾಗಿ ತಿಳಿಸಿರುತ್ತಾರೆ. ಈ ಪ್ರಕರಣವನ್ನು ಬೆಳಕಿಗೆ ಭೇದಿಸುವಲ್ಲಿ ಯಶ ಕಂಡಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ಅಭಿನಂದಿಸಿ ಶ್ಲಾಘಿಸಿದ್ದಾರೆ.