ಪ್ರಸ್ತುತ ನನಗೆ ಮಹಾಲಿಂಗಪುರ ಪಟ್ಟಣವನ್ನು ಹೋಬಳಿ ಮಾಡಲಿಕ್ಕೆ ಮಾತ್ರ ಸಾಧ್ಯ: ಸಚಿವ ತಿಮ್ಮಾಪುರ.
ಮಹಾಲಿಂಗಪುರ 03 : ಪ್ರಸ್ತುತ ನನಗೆ ಮಹಾಲಿಂಗಪುರ ಪಟ್ಟಣವನ್ನು ಹೋಬಳಿ ಮಾಡಲಿಕ್ಕೆ ಮಾತ್ರ ಸಾಧ್ಯವಿದ್ದು, ಉಳಿದಂತೆ ತಾಲೂಕು ಪ್ರದೇಶಕ್ಕಾಗಿ ಹಂತ ಹಂತವಾಗಿ ಪ್ರಯತ್ನಿಸುತ್ತೇನೆ ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ಹೇಳಿದರು.
ತಾಲೂಕು ಹೋರಾಟದ 599 ದಿವಸದ ಹಾಗೂ ಮೂರನೇ ದಿನದ ಆಮರಣ ಉಪವಾಸ ವೇದಿಕೆಯಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆಯೂ ಮಾಜಿ ಸಚಿವೆ ಉಮಾಶ್ರೀ ಆದಿಯಾಗಿ ಅನೇಕ ಮುಖಂಡರು ಮತ್ತು ಜನಸಾಮಾನ್ಯರು ತಾಲೂಕು ಕೇಂದ್ರಕ್ಕಾಗಿ ಹೋರಾಟ ಮಾಡಿದ್ದಾರೆ ಎರಡು ಮಾತಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಏನಾದ್ರೂ ಹೇಳೋದು ಬೇಡ ಯಾವುದಕ್ಕೂ ನಾನು ಸಮ್ಮಂಧಿಸಿದವರೊಂದಿಗೆ ಮಾತನಾಡುತ್ತೇನೆ, ಈಗ ಆಮರಣ ಉಪವಾಸ ಸತ್ಯಾಗ್ರಹದಿಂದ ವಿಮುಕ್ತಿಗೊಂಡರೆ ಒಳ್ಳೆಯದು ಎಂದು ಹೇಳಿ ತರಾತುರಿಯಲ್ಲಿ ವೇದಿಕೆಯಿಂದ ನಿರ್ಗಮಿಸಿದರು.
ಮಾಜಿ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ,, ಮುಖಂಡ ಮಹಾದೇವ ಮಾರಾಪೂರ ಇನ್ನೂ ಮುಂತಾದವರು ಸಚಿವರ ಮಾತಿಗೆ ಒಪ್ಪದೆ ತಾವು ಅಧಿಕಾರವಿಲ್ಲದಾಗ ನೀಡಿದ ತಾಲೂಕು ಭರವಸೆಯನ್ನು ಈಗ ನಿಮ್ಮದೆ ಸರ್ಕಾರವಿದ್ದು ಈಡೇರಿಸಬೇಕು ಎಂದು ಸಚಿವರನ್ನು ಆಗ್ರಹಿಸಿದರು.ಹಾಲಿ ಗೌರವಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿದರು.
ವೇದಿಕೆ ಮೇಲೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹಾಗೂ ಇನ್ನೂ ಹಲವರು ಮಾತನಾಡಿ, ಸಚಿವ ತಿಮ್ಮಾಪುರ ಅವರು ವೇದಿಕೆಗೆ ಆಗಮಿಸಿ ಸೌಜನ್ಯಕ್ಕಾದರೂ ಮೂರು ದಿನಗಳಿಂದ ಆಮರಣ ಉಪವಾಸ ಹಮ್ಮಿಕೊಂಡಿರುವ ನಮ್ಮ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿ ಮಾತನಾಡಲಿಲ್ಲ. ಇದು ಅವರ ಅಧಿಕಾರದ ದರ್ ಎದ್ದು ಕಾಣುತ್ತಿದೆ ಪಟ್ಟಣಕ್ಕೆ ಮಾಡಿರುವ ಅವಮಾನವಾಗಿದೆ. ಇದೆ ಅವಮಾನ ಜನತೆಯ ಉಗ್ರ ಹೋರಾಟಕ್ಕೂ ಮುನ್ನುಡಿಯಾಗಲಿದೆ, ಏನೆಯಾಗಲಿ ನಮ್ಮ ಹೋರಾಟ ಅಚಲವಾಗಿದ್ದು ನಾವು ಮಾಡು ಇಲ್ಲವೇ ಮಡಿ ಹಂತದಲ್ಲಿದ್ದೇವೆ ಜೀವದ ಹಂಗು ತೊರೆದು ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದರು.
ಆಮರಣ ಹೋರಾಟಕ್ಕೆ ಕುಳಿತವರಲ್ಲಿ ಮೂರನೆ ದಿನ ರವಿವಾರ ಮುಂಜಾನೆಯ ವೇಳೆಗೆ ಹಲವರಲ್ಲಿ ರಕ್ತದೊತ್ತಡ ಪ್ರಮಾಣ ಹೆಚ್ಚು ಕಡಿಮೆಯಾಗಿ ಸಮೀಪದ ಸಂಗಾನಟ್ಟಿ ಗ್ರಾಮದ ಮಹಾಲಿಂಗಪ್ಪ ಅವರಾದಿ (87) ಹಾಗೂ ದುಂಡಪ್ಪ ಇಟ್ನಾಳ (70) ಈ ವಯೋವೃದ್ಧರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೀವರಕ್ಷಕ ಓಷಧಿಗಳನ್ನು ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಸ್ಪತ್ರೆಯ ಡಾ.ಸಿ ಎಂ.ವಜ್ಜರ್ಮಟ್ಟಿ ಮಾಹಿತಿ ನೀಡಿದ್ದಾರೆ.
ಬಾಗಲಕೋಟ ಜಿಲ್ಲಾಧ್ಯಕ್ಷ ಎಸ್ ಜಿ.ನಂಜಯ್ಯನಮಠ, ಧುರೀಣರಾದ ಸಿದ್ದಪ್ಪ ಕೊಣ್ಣೂರ, ಯಲ್ಲನ್ನಗೌಡ ಪಾಟೀಲ್, ರಂಗಣ್ಣಗೌಡ ಪಾಟೀಲ,ಮಹಾಲಿಂಗಪ್ಪ ತಟ್ಟಿಮನಿ, ಅರ್ಜುನ ಹಲಗಿಗೌಡರ್, ಬಲವಂತಗೌಡ ಪಾಟೀಲ್, ಸಿದ್ದನಗೌಡ ಪಾಟೀಲ, ಅಬ್ದುಲ್ ಭಗವಾನ್, ಎಸ್ ಉಳ್ಳಾಗಡ್ಡಿ, ವೀರೇಶ ಆಸಂಗಿ, ಶಿವಲಿಂಗ ಟಿರ್ಕಿ,ದುಂಡಪ್ಪ ಜಾಧವ, ಜೊತೆಪ್ಪ ಕಪರಟ್ಟಿ, ವೆಂಕಣ್ಣ ಗುಂಡಾ, ಭೀಮಶಿ ಸಸಾಲಟ್ಟಿ, ನಿಂಗಪ್ಪ ಬಾಳಿಕಾಯಿ, ಜಯವಂತ ಬಾಡಗಿ, ಮಲ್ಲು ಸಂಗಣ್ಣವರ, ಮುಸ್ತಾಕ್ ಚಿಕ್ಕೋಡಿ, ಪ್ರಭಾಕರ ಕುಳ್ಳೊಳ್ಳಿ, ಕುಮಾರ ಕುಳಲಿ, ಅನಿಲ ಒಸ್ವಾಲ, ಅನಿಲ ಜೋಶಿ, ಶಂಕರೆಪ್ಪ ಹಣಗಂಡಿ, ದುಂಡಪ್ಪ ಪಟ್ಟಣಶೆಟ್ಟಿ,ಭೀಮಶಿ ತಿಮ್ಮಾಪುರ, ಮಹಾಲಿಂಗ ಮಾಳಿ, ಸಿದ್ದರಾಮ ಯರಗಟ್ಟಿ, ಸಂಜಯ ಅಂಬಿ,ಮಲ್ಲಪ್ಪ ಮಿರ್ಜಿ, ರಫಿಕ್ ಮಾಲಾದಾರ, ಅರ್ಜುನ ಮೋಪಾಗರ,ನಜೀರ್ ಅತ್ತಾರ, ಆನಂದ ಹಟ್ಟಿ, ವಿಠಲ ಸಂಶಿ, ಸೇರಿ ಹಲವರಿದ್ದರು.