ದಲಿತರ ಮೇಲಿನ ಹಲ್ಲೆ ಹಾಗೂ ಕಾನೂನು ಬದ್ಧ ನಾಯ್ಯ ಒದಗಿಸುವಂತೆ ಮನವಿ
ಕುಷ್ಟಗಿ 23: ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ದಲಿತರಿಗೆ ಕಾನೂನು ಬದ್ಧ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗ್ಗೆ ಇಲ್ಲಿನ ಪೋಲಿಸ್ ಠಾಣೆಯ ವೃತ್ತ ಕಚೇರಿಯ ಆವರಣದಲ್ಲಿ ತಾಲೂಕು ಜಾಂಭವ ಯುವ ಸೇನಾ ಸಮಿತಿ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಾಂಭವ ಯುವ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಯಮನೂರು ಮೇಲಿನಮನಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನಿರಂತರವಾಗಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತಿವೆ ಹಾಗೂ ಅಸ್ಪೃಶ್ಯತೆ ಆಚರಣೆಗಳನ್ನು ಜೀವಂತವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇತ್ತೀಚಿಗೆ ನಡೆದ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಎರಡು ವರ್ಷದ ಮಗು ಹುಟ್ಟುಹಬ್ಬದ ನಿಮಿತ್ಯವಾಗಿ ಆಟವಾಡಿಕೊಂಡು
ದೇವಸ್ಥಾನ ಒಳಗೆ ಪ್ರವೇಶ ಮಾಡಿದ ಹಿನ್ನೆಲೆ ದಲಿತರಿಗೆ ದಂಡ ಮತ್ತು ಗ್ರಾಮದಿಂದ ಬಹಿಷ್ಕಾರ ಮಾಡಿದ ವಿಷಯ ರಾಜ್ಯದ ಎಲ್ಲಾ ಜನತೆಗೆ ತಿಳಿದಿರುವ ವಿಷಯವಾಗಿದೆ.
ಕಾರಟಗಿ ಮತ್ತು ಕನಕಗಿರಿ, ಗಂಗಾವತಿ ತಾಲೂಕುಗಳಲ್ಲಿ ದಲಿತರಿಗೆ ರಕ್ಷಣೆಯಿಲ್ಲದವಾಗಿದೆ ದಲಿತರ ಮೇಲೆ ಕ್ಷುಲ್ಲಕ ಕಾರಣಗಳಿಗೆ ಮೇಲ್ಜಾತಿಯ ಜನರು ದೈಹಿಕವಾಗಿ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆ ಅವರ ವಿರುದ್ಧ ಪ್ರತಿಭಟನೆ ಮಾಡಿದರೆ ಕೊಲೆಗಳನ್ನು ಮಾಡಿದ್ದಾರೆ.
ಮೇ21 ರಂದು ಕಾರಟಗಿ ತಾಲೂಕಿನ ನಂದಿಹಳ್ಳಿ ಎಂಬ ಗ್ರಾಮದಲ್ಲಿ ಸಂವಿಧಾನ ಡಾ. ಶಿಲ್ಪಿ ಬಿ.ಆರ್ ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳನ್ನು ಹಾಕುವ ಸಲುವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ಕೆಲವು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ಘಟನೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಇಂತಹ ಘಟನೆಗಳು ಕೊಪ್ಪಳ ಜಿಲ್ಲೆಯಲ್ಲಿ ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ ಆದರೆ ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಡಳಿತ ತಾಲೂಕು ಆಡಳಿತ ಅಧಿಕಾರಿಗಳು ಕಿಡಿಗೇಡಿಗಳ
ವಿರುದ್ಧ ಪ್ರಕರಣ ದಾಖಲಿಸದೆ ರಾಜಿ ಸಂಧಾನ ಮಾಡಲು ಪ್ರಯತ್ನಿಸುತ್ತಾರೆ.
ತಪ್ಪು ಮಾಡಿದವರು ಯಾವ ಸಮುದಾಯದ ವ್ಯಕ್ತಿಗಳಾದರು ಸರಿ ಕಾನೂನಿನ ಮುಖಾಂತರ ಅವರಿಗೆ ಕಠಿಣ ಶಿಕ್ಷೆಯನ್ನು ಕೊಡಿಸಬೇಕು ದಲಿತರ ಮೇಲಿನ ದೌರ್ಜನ್ಯ ಹಾಗೂ ಮಾರಣಾಂತಿಕ ಹಲ್ಲೆಗಳನ್ನು ನಿಲ್ಲಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪೊಲೀಸ್ ಪಾಟೀಲ್, ಮಂಜುನಾಥ ಕಟ್ಟಿಮನಿ, ಪ್ರಕಾಶ ತಳಕೇರಿ, ರಮೇಶ್ ಮೇಲಿನಮನಿ, ಗಣೇಶ್ ಕ್ಯಾದಿಗುಪ್ಪ, ಆಂಜನೇಯ ಕಂದಕೂರ, ಶಿವರಾಜ್ ಕಟ್ಟಿಮನಿ, ಪರಶುರಾಮ್ ಗಂಗನಾಳ ಹಾಗೂ ಜಾಂಭವ ಯುವ ಸೇನಾ ಸಮಿತಿ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.