ಜನವರಿಯಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅರಿವು ಕಾರ್ಯಾಗಾರ

ಜನವರಿಯಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅರಿವು ಕಾರ್ಯಾಗಾರ

ಡಿಹೆಚ್‌ಓ ಡಾ. ಶಶಿ ಪಾಟೀಲ 

ಧಾರವಾಡ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಶಿ ಪಾಟೀಲ ಅವರು ಅಧ್ಯಕ್ಷತೆಯಲ್ಲಿಂದು (ಡಿ.21) ಪಿ.ಸಿ ್ಘ ಪಿ.ಎನ್‌.ಡಿ.ಟಿ ಕಾಯ್ದೆಯ (ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆಯ) ಜಿಲ್ಲಾ ಸಲಹಾ ಸಮಿತಿ ಸಭೆ ಡಿಹೆಚ್‌ಓ ಕಚೇರಿಯಲ್ಲಿ ಜರುಗಿತು.  

ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ಅಲ್ಟ್ರಾಸೌಂಡ ಸ್ಕ್ಯಾನಿಂಗ ಕೇಂದ್ರಗಳಿಗೆ ಹಾಗೂ ನೋಂದಣಿ ಅವಧಿ ಮುಕ್ತಾಯವಾಗಿರುವ ಕೇಂದ್ರಗಳ ನೋಂದಣಿ ಅವಧಿಯನ್ನು ನವೀಕರಣ ಮಾಡುವ ಒಟ್ಟು 30 ಪ್ರಸ್ತಾವನೆಗಳನ್ನು ಸಭೆಯಲ್ಲಿ ಪರೀಶೀಲಿಸಲಾಯಿತು. ನಿಯಮಾನುಸಾರ ಹೊಸ ಕೇಂದ್ರಗಳಿಗೆ ಅನುಮತಿ ನೀಡಲಾಯಿತು ಹಾಗೂ ನೋಂದಣಿ ಅವಧಿ ಮುಕ್ತಾಯವಾಗಿರುವ ಕೇಂದ್ರಗಳ ನೋಂದಣಿ ಅವಧಿಯನ್ನು ನವೀಕರಣ ಮಾಡುವ ಬಗ್ಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಬರುವ ಜನವರಿಯಲ್ಲಿ ಪಿ.ಸಿ ್ಘ ಪಿ.ಎನ್‌.ಡಿ.ಟಿ ಕಾಯ್ದೆಯ ಕುರಿತು ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು.  

ಜಿಲ್ಲಾ ಪಿ.ಸಿ. ಹಾಗೂ ಪಿ.ಎನ್‌.ಡಿ.ಟಿ ಸಮಿತಿಯ ಪೂರ್ವಾನುಮತಿ ಪಡೆಯದೇ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಶೀನನ್ನು ಅಳವಡಿಸಿಕೊಂಡು ಕಾರ್ಯಾರಂಭ ಮಾಡುತ್ತಿರುವ ಹುಬ್ಬಳ್ಳಿಯ ಎನ್‌.ಎಂ.ಆರ್‌. ಸ್ಕ್ಯಾನ್ ಸೆಂಟರ್‌ಗೆ ನೋಟೀಸ್ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸ್ಕ್ಯಾನಿಂಗ್ ಮಶಿನ್ ಮಾರಾಟ ಮಾಡಿದ ಕಂಪನಿಗೂ ಸಹ ನೋಟೀಸ್ ನೀಡುವ ಬಗ್ಗೆ  ಚರ್ಚಿಸಲಾಯಿತು. 

ಅಲ್ಟ್ರಾಸೌಂಡ್ ಉಪಯೋಗಿಸುವ ಪ್ರತಿಯೊಂದು ಆಸ್ಪತ್ರೆಗಳು ಕೇಂದ್ರ ಸರ್ಕಾರದ ಪಿಎನ್‌ಡಿಟಿ ಕಾಯ್ದೆಯ ಪುಸ್ತಕವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕೆಂದು ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಭಾರತಿ ಕೊರ್ಲಹಳ್ಳಿ (ತಾವರಗೇರಿ) ತಿಳಿಸಿದರು.  

ಪಿಎನ್‌ಡಿಟಿ ಕಾಯ್ದೆ ಅನುಸಾರವಾಗಿ ಗೈನೋಕಾಲಿಸ್ಟ್‌, ರೇಡಿಯೋಲಾಜಿಸ್ಟ್‌ ಹಾಗೂ ಕಾರ್ಡಿಯೋಲಾಜಿಸ್ಟ್‌ಗಳು ಮಾತ್ರ ಅಲ್ಟ್ರಾಸೌಂಡ್ ಬಳಕೆ ಮಾಡಬೇಕೆಂದು ತಿಳಿಸಲಾಗಿದೆ. ಆದರೆ ನೆಪ್ರೊಲಾಜಿಸ್ಟ್‌, ಎನ್‌ಸ್ಥೆಲಾಜಿಸ್ಟ್‌ಗಳೂ ಸಹ ಅಗತ್ಯ ತರಬೇತಿ ಪಡೆದು ಯಂತ್ರವನ್ನು ಬಳಸಲು ಅಗತ್ಯ ಪರವಾನಿಗೆ ನೀಡುವ ಬಗ್ಗೆ ಕಾಯ್ದೆಯಲ್ಲಿ ತಿದ್ದುಪಿಡಿ ತರುವಂತೆ ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಬೇಕೆಂದು ಸಮಿತಿ ಅಧ್ಯಕ್ಷರಾದ ಡಾ. ಭಾರತಿ ಸಲಹೆ ನೀಡಿದರು. ವಿವಿದೆಡೆ ಆರೋಗ್ಯ ಶಿಬಿರಗಳನ್ನು ನಡೆಸುವಾಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಶಿನ್ ಉಪಯೋಗಿಸುವ ಮುಂಚೆ ಸಮಿತಿಯ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಸಲಹಾ ಸಮಿತಿಯು ಇನ್ನು ಮುಂದು ಆಧುನಿಕ ತಂತ್ರಜ್ಞಾನ ಬಳಸಿ, ಇಮೇಲ್, ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಅರ್ಜಿ ಪ್ರಸ್ತಾವನೆಗಳಿಗೆ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಸಹ ಅವರು ಸಲಹೆ ನೀಡಿದರು.  ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ : ಸುಜಾತಾ ಹಸವಿಮಠ,  ಡಾ : ಉಮೇಶ ಹಳ್ಳಿಕೇರಿ ಸದಸ್ಯರು, ಡಾ : ಪ್ರಕಾಶ ಬೀರನೂರ, ಸುಜಾತಾ ಆನಿಶೆಟ್ಟರ, ಸುಜಾತಾ ಆನಿಶೆಟ್ಟರ, ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಉಪಸ್ಥಿತರಿದ್ದರು. 


ಸುದ್ದಿ ಓದಿ