ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಭಜರಂಗ್ ಪೂನಿಯಾ
ಟೋಕಿಯೊ, ಆಗಸ್ಟ್ 7 ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಭಜರಂಗ್ ಪೂನಿಯಾ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಮೊದಲ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಮೂಲಕ ಅಬ್ಬರಿಸಿದ್ದಾರೆ.
65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸೆಮಿಸ್‌ನಲ್ಲಿ ಸೋತರೂ, ಕಂಚಿನ ಪದಕ ಹೋರಾಟದಲ್ಲಿ ಅವರು ಪೂರ್ಣ ಪ್ರಾಬಲ್ಯ ಸಾಧಿಸಿದ್ದಾರೆ. ಎದುರಾಳಿ, ಕಜಕಿಸ್ತಾನದ ಕುಸ್ತಿಪಟು ದೌಲತ್ ನಿಯಾಜ್‌ಬೆಕೊವ್ ಕನಿಷ್ಟ ಅವಕಾಶವಿಲ್ಲದೆ 8-0 ಅಂತರಿಂದ ಪರಾಭವಗೊಳಿಸಿದ್ದಾರೆ. “ಉಡದ ಪಟ್ಟು” ಎಂದರೆ ಏನು ಎಂಬುದರ ರುಚಿಯನ್ನು ಎದುರಾಳಿಗೆ ತೋರಿಸಿಕೊಟ್ಟು ಕಂಚು ಗೆಲ್ಲುವ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಆರನೇ ಪದಕ ತಂದುಕೊಟ್ಟಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ದೇಶಕ್ಕಾಗಿ ಪದಕ ಗೆದ್ದ ಆರನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದೇ ಒಲಿಂಪಿಕ್ಸ್ ನಲ್ಲಿ ರವಿ ಕುಮಾರ್ ದಹಿಯಾ ಬೆಳ್ಳಿ ಗೆದ್ದಿದ್ದರು.. ಈಗ ಬಜರಂಗ್ ಕಂಚು ಗೆದ್ದಿದ್ದಾರೆ. ಇದಕ್ಕೂ ಮೊದಲು ಕೆ.ಡಿ. ಜಾಧವ್ (ಕಂಚು), ಸುಶೀಲ್ ಕುಮಾರ್ (ಕಂಚು, ಬೆಳ್ಳಿ), ಸಾಕ್ಷಿ ಮಲಿಕ್ (ಕಂಚು), ಯೋಗೇಶ್ವರ್ ದತ್ (ಕಂಚು), ರವಿ ದಹಿಯಾ (ಬೆಳ್ಳಿ) ಗೆದ್ದಿದ್ದರು.
ಪಂದ್ಯದ ವಿಷಯಕ್ಕೆ ಬಂದರೆ .. ಭಜರಂಗ್ ಮೊದಲ ಅವಧಿಯಲ್ಲಿ ಒಂದು ಪಾಯಿಂಟ್ ಗಳಿಸಿದರು. ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿರುವ ದೌಲತ್, ಈ ಪಂದ್ಯದಲ್ಲಿ ಭಜರಂಗ್ ವಿರುದ್ಧ ತೀವ್ರ ಪೈಪೋಟಿ ನಡೆಸಿದರು. ಮೊದಲ ಅವಧಿಯ ಅಂತ್ಯದಲ್ಲಿ ಭಜರಂಗ್ ಮತ್ತೊಂದು ಪಾಯಿಂಟ್ ಗಳಿಸಿದರು. ಇದರಿಂದ ಆ ಅವಧಿಯಲ್ಲಿ 2-0 ಮುನ್ನಡೆ ನೀಡಿತು. ಎರಡನೇ ಅವಧಿ ಕೂಡ ರೋಚಕವಾಗಿ ಸಾಗಿತು. ಈ ಅವಧಿಯಲ್ಲಿ ಭಜರಂಗ್ ಎರಡು ಪಾಯಿಂಟ್ ಗಳನ್ನು ಗಳಿಸಿದರು. ನಂತರ ಅವರು ಸತತವಾಗಿ ಎರಡು ಅಂಕಗಳನ್ನು ಗಳಿಸಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು. ಆ ಅವಧಿಯಲ್ಲಿ ಆರು ಪಾಯಿಂಟ್‌ಗಳಿಂದ ಗೆದ್ದರು. ಭಜರಂಗ್ ಗಳಿಸಿದ ಕಂಚಿನಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪದಕಗಳ ಸಂಖ್ಯೆ ಆರಕ್ಕೆ ಏರಿದೆ. ಇಲ್ಲಿಯವರೆಗೆ ಭಾರತ 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದಿದೆ.