ಇಂಡಿ

ಡಿವೈಎಸ್ಪಿ ವಿರುದ್ಧ ಅನುಚಿತ ವರ್ತನೆ ಆರೋಪ: ಕ್ರಮಕ್ಕೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ

ಡಿವೈಎಸ್ಪಿ ವಿರುದ್ಧ ಅನುಚಿತ ವರ್ತನೆ ಆರೋಪ: ಕ್ರಮಕ್ಕೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ


ಇಂಡಿ 02:  ಮರಗೂರು ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ನಡೆದ ಬಂಥನಾಳ ಪೀಠದ ವಿವಾದದ ಸಂಧಾನ ಸಭೆಯಲ್ಲಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಅವರು ಅನುಚಿತವಾಗಿ ವರ್ತಿಸಿದ್ದು, ತಮ್ಮ ನಿರ್ಧಾರವನ್ನು ಕೂಡಲೇ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ ಎಂದು ವೃಷಭಲಿಂಗೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಡಿವೈಎಸ್ಪಿ ಕಚೇರಿ ಎದುರು ಭಕ್ತರು ಪ್ರತಿಭಟನೆ ನಡೆಸಿದರು.  

ಭಾನುವಾರ ನಡೆದ ಸಂಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐ ಸುನಿಲ್ ಪಾಟೀಲ ಸೇರಿದಂತೆ ಮಠಾಧೀಶರು ಭಾಗವಹಿಸಿದ್ದರು. ಸಭೆಯಲ್ಲಿ ತಮ್ಮ ಮೇಲೆ ಒತ್ತಡ ಹೇರಲಾಗಿದ್ದು, ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೂಡ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವೃಷಭಲಿಂಗ ಸ್ವಾಮೀಜಿ ಆರೋಪಿಸಿದರು.  

ಈ ಘಟನೆಯ ಕುರಿತು ಗುರುವಾರ ಬಂಥನಾಳ ಪೀಠದಲ್ಲಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೃಷಭಲಿಂಗ ಸ್ವಾಮೀಜಿ ಮಾತನಾಡಿ, ಭಾನುವಾರ ಮರಗೂರಿನ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಸಭೆ ತಮ್ಮ ಪ್ರಾಣಕ್ಕೆ ಅಪಾಯ ತಂದೊಡ್ಡುವಂತಹ ಪರಿಸ್ಥಿತಿ ನಿರ್ಮಿಸಿತ್ತು. ತಮ್ಮ ಮೇಲೆ ಒತ್ತಡ ಹೇರಲಾಗಿದ್ದು, ತಾವು ಬದುಕಿ ಬಂದಿರುವುದೇ ಪವಾಡ ಎಂದು ಹೇಳಿದರು.  

ಸ್ವಾಮೀಜಿಯವರ ಆರೋಪಗಳಿಂದ ಆಕ್ರೋಶಗೊಂಡ ಭಕ್ತರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯನ್ನು ಗಮನಿಸಿದ ಪೊಲೀಸರು ಭಕ್ತರನ್ನು ತಡೆಯಲು ಪ್ರಯತ್ನಿಸಿದರು. ಬಳಿಕ ದಿಂಗಾಲೇಶ್ವರ ಶ್ರೀಗಳು ಮಧ್ಯಸ್ಥಿಕೆ ವಹಿಸಿ ಭಕ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.  

ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಅವರು ತಾವು ಕೂಡ ಲಚ್ಯಾಣ ಮಠದ ಭಕ್ತರಾಗಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರು. ಭಕ್ತರು ಸಹನೆ ಕಾಪಾಡಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದರು.  

ಮುತಿಗೆ ಯತ್ನ ವಿಫಲಗೊಳಿಸಲು ಸಿಪಿಐ ಸುನಿಲ್ ಪಾಟೀಲ ನೇತೃತ್ವದಲ್ಲಿ ಪೊಲೀಸರು ಕ್ರಮ ಕೈಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.  


ಸುದ್ದಿ ಓದಿ