ಕನ್ನಡಿಗರೆಲ್ಲರೂ ಕನ್ನಡ ಸಾಹಿತ್ಯ ಪರಿತ್ತಿನ ಸದಸ್ಯರಾಗಿ: ಡಾ. ಸಂತೋಷ ಯಕ್ಕುಂಡಿ

ಕನ್ನಡಿಗರೆಲ್ಲರೂ ಕನ್ನಡ ಸಾಹಿತ್ಯ ಪರಿತ್ತಿನ ಸದಸ್ಯರಾಗಿ: ಡಾ. ಸಂತೋಷ ಯಕ್ಕುಂಡಿ

ಲೋಕದರ್ಶನ ವರದಿ 

ಬೈಲಹೊಂಗಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೆಯ ಸಂಸ್ಥಾಪನಾ ದಿನಾಚರಣೆ 

ಬೈಲಹೊಂಗಲ 05: ಶತಮಾನ ಕಂಡ ನಾಡಿನ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡಿಗರೆಲ್ಲರೂ ಆಜೀವ ಸದಸ್ಯರಾಗಿರಿ ಎಂದು ಬಳ್ಳಾರಿಯ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ತರ್ಕಶಾಸ್ತ್ರ ಉಪನ್ಯಾಸಕರಾದ ಡಾ. ಸಂತೋಷ ಶಂಕರ​‍್ಪ ಯಕ್ಕುಂಡಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕದಿಂದ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಎಚ್‌.ವ್ಹಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 112ನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತ ಅವರು ಮಾತನಾಡಿದರು. ಕನ್ನಡದ ನೆಲ, ಜಲ, ನಾಡು, ನುಡಿ, ಸಂಸ್ಕೃತಿಯನ್ನು ಸಂರಕ್ಷಿಸುವ ಸದುದ್ದೇಶದಿಂದ ಸ್ಥಾಪನೆಯಾದ ಪರಿಷತ್ತು ಇಂದು ಲಕ್ಷಾಂತರ ಸದಸ್ಯರನ್ನು ಹೊಂದಿದೆ ಎಂದರು. ಕರ್ನಾಟಕ ಏಕೀಕರಣದಲ್ಲಿ ಪರಿಷತ್ತೂ ಕೂಡ ಪ್ರಮುಖ ಪಾತ್ರ ವಹಿಸಿದೆ. ಸಾಹಿತ್ಯ ಸಮ್ಮೇಳನ, ವಿಚಾರ ಗೋಷ್ಠಿ, ಪುಸ್ತಕ ಪ್ರಕಟಣೆ ಮುಂತಾದ ಕಾರ್ಯಗಳನ್ನು ಮಾಡುವುದರ ಜೊತೆಗೆ ನಾಡಿನ ಸಾಹಿತಿಗಳಿಗೆ ಉತ್ತೇಜನ ನೀಡುವ ಪರಿಷತ್ತು ಕನ್ನಡದ ಅಸ್ಮಿತೆಯ ಪ್ರತೀಕ ಎಂದು ಅವರು ಅಭಿಪ್ರಾಯಪಟ್ಟರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಚ್‌.ವ್ಹಿ. ಕೌಜಲಗಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಿ.ಎನ್‌. ಪಾಟೀಲ ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಬಗ್ಗೆ ನಮಗೆಲ್ಲ ಹೆಮ್ಮೆ, ಅಭಿಮಾನ ಇರಬೇಕು ಎಂದರು. ಕನ್ನಡಕ್ಕಾಗಿ ಒಂದಾಗುವ ಮನೋಭಾವ ಬೆಳೆಸಿಕೊಂಡು ಕನ್ನಡದ ತೇರನ್ನು ಎಲ್ಲರೂ ಸೇರಿ ಎಳೆಯೋಣ ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎನ್‌.ಆರ್‌. ಠಕ್ಕಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1915 ರಲ್ಲಿ ಸ್ಥಾಪಿತವಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು. ಪರಿಷತ್ತನ್ನು ಸಂವರ್ಧನೆಗೊಳಿಸುವಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಯೂ ಅಪಾರವಾಗಿದೆ. ಇಂದಿನ ಯುವಜನತೆ ಕನ್ನಡಾಭಿಮಾನ ಹೆಚ್ಚಿಸಿಕೊಂಡು ಕನ್ನಡವನ್ನು ಕಟ್ಟುವ ಕಾಯಕದಲ್ಲಿ ಖುಷಿಯಿಂದ ಕೈಜೋಡಿಸಬೇಕು ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ 2025-26ನೆಯ ಸಾಲಿನ ಎಸ್‌.ಎಸ್‌.ಎಲ್‌.ಸಿಯಲ್ಲಿ ಬೈಲಹೊಂಗಲ ತಾಲೂಕಿನಲ್ಲಿ ಅತ್ಯುತ್ತಮ ಅಂಕ ಗಳಿಸಿದ ತಾಜೀನ್ ಮಕ್ತುಮಹುಸೇನ ಸಂಗೊಳ್ಳಿ, ಸಾಕ್ಷಿ ಶಿವಶಂಕರ ನೇಸರಗಿ, ನಿಸರ್ಗ ಮಹೇಶ ಹುದ್ದಾರ ಹಾಗೂ ಕನ್ನಡ ಮಾಧ್ಯಮದಲ್ಲಿ ಅತ್ಯುತ್ತಮ ಅಂಕ ಗಳಿಸಿದ ರವಿ ಪಕೀರ​‍್ಪ ಗೋಡಿ, ಶ್ರೇಯಾ ಉಮೇಶ ಹೂಲಿಮಠ, ದೀಪಾ ಸಿದ್ದಪ್ಪ ಲಕ್ಕುಂಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾದ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಪದಾಧಿಕಾರಿಗಳಾದ ಪ್ರೇಮಕ್ಕ ಅಂಗಡಿ, ಶ್ರೀಕಾಂತ ಉಳ್ಳೇಗಡ್ಡಿ, ಲಕ್ಷ್ಮೀ ಮುಗಡ್ಲಿಮಠ, ಕಾಲೇಜಿನ ಸಿಬ್ಬಂದಿಗಳಾದ ಎಂ.ಎಸ್‌.ಪಟ್ಟಣಶೆಟ್ಟಿ, ಡಿ.ಬಿ.ನರಗುಂದ, ಅಮ್ರೋಜ್ ಜೋಸೆಫ್, ಪದ್ಮಶ್ರೀ ಪಾಟೀಲ, ಸುನಿಲ ಬಾಳಿ ಹಾಗೂ ವಿದ್ಯಾರ್ಥಿಗಳು, ಪಾಲಕರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಸಂದೀಪ ಹೆದ್ದೂರಿ ಪ್ರಾರ್ಥಿಸಿದರು. ಸೈದುಸಾಬ ದಬಾಡಿ ಸ್ವಾಗತಿಸಿದರು. ಪವಿತ್ರಾ ಪಚ್ಚೇದಾರ ವಂದಿಸಿದರು. ಕಸಾಪ ಪದಾಧಿಕಾರಿಗಳಾದ ಸಂತೋಷ ಹಡಪದ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಜು ಹಕ್ಕಿ ನಿರ್ವಹಿಸಿದರು. 


ಸುದ್ದಿ ಓದಿ