ಬಾಳೆ ಬೆಳೆ ಕೀಟ ನಿರ್ವಹಣೆಗೆ ಸಲಹೆ
ಮೂಡಲಗಿ 28: ಭಾರತೀಯ ಕೃಷಿ ಅನುಸಂಧಾನ ಪರಷತ್ತು - ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ (ಹಣ್ಣುಗಳು), ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿ, ಗೋಕಾಕ (ತಾ) ಬೆಳಗಾವಿ (ಜಿ) ವಿಭಾಗದ ವಿಜ್ಞಾನಿಗಳಾದ ಡಾ.ಕಾಂತರಾಜು. ವಿ. ಸುಹಾಸಿನಿ ಜಲವಾದಿ ಮತ್ತು ಡಾ. ಸಚಿನಕುಮಾರ ನಂದಿಮಠ ಇವರು ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ ಮತ್ತು ರಾಯಬಾಗ ತಾಲೂಕಿನ ಕಲ್ಲೋಳಿ, ನಾಗನೂರು, ಗುಲರ್ಾಪೂರ, ಹಿಟ್ನಾಳ, ಸೈದಾಪೂರ ಮತ್ತು ಹಳ್ಳೂರ ಗ್ರಾಮಗಳ ವಿವಿಧ ರೈತರ ಬಾಳೆ ಬೆಳೆಯ ಕ್ಷೇತ್ರ ಭೇಟಿ ಮಾಡಿ ವಿವಿಧ ರೋಗಗಳ ಹತೋಟಿಗಳ ಬಗ್ಗೆ ಸಲಹೆ ನೀಡಿದ್ದಾರೆ.
ಬಾಳೆ ಬೆಳೆಗೆ ಈಗಾಗಲೇ ರಾಜಾಪೂರಿ (ಜವಾರಿ) ಮತ್ತು ಗ್ರ್ಯಾಂಡ್ ನೈನ (ಜಿ-9) ತಳಿಗಳಿಗೆ ಸಿಗಾಟೋಕ (ಯೂಮೋಸಿಯೇ) ಎಲೆ ಚುಕ್ಕೆ ರೋಗ, ಗಡ್ಡೆ ಕೊಳೆರೋಗ ಅಥವಾ ಸುಳಿ ಕೊಳೆ ರೋಗ ಮತ್ತು ಸುರಂಗ ಕೊರಕ ಜಂತು ರೋಗದ ಬಾದೆ ಕಂಡು ಬಂದಿದ್ದು, ರೈತರು ಈ ಕೆಳಕಂಡ ಹತೋಟಿ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದ್ದಾರೆ.
ಸಿಗಾಟೋಕ (ಯೂಮೋಸಿಯೇ) ಎಲೆ ಚುಕ್ಕೆ ರೋಗವು ಸಾಮಾನ್ಯವಾಗಿ ಜುಲೈ ತಿಂಗಳಿಂದ ಫೆಬ್ರವರಿ ತಿಂಗಳುಗಳಲ್ಲಿ ಹಾಗೂ ಮಳೆ ಮತ್ತು ತಂಪು ವಾತಾವರಣ ಇದ್ದಲ್ಲಿ ಹೆಚ್ಚಾಗಿರುತ್ತದೆ. ಹೆಚ್ಚು ಸಾಂದ್ರತೆಯಿಂದ ಗಿಡಗಳನ್ನು ನಾಟಿ ಮಾಡುವುದು, ರೋಗ ಪೀಡಿತ ಎಲೆಗಳನ್ನು ಗಿಡದಿಂದ ತೆಗೆಯದಿರುವುದು, ರೋಗ ಪೀಡಿತ ಎಲೆಗಳನ್ನು ತೆಗೆದು ಬಾಳೆ ಸಾಲುಗಳ ಮಧ್ಯೆ ಹಾಕುವುದು, ಕಾಲುವೆ ಮುಖಾಂತರ ಗಿಡಗಳಿಗೆ ಹೆಚ್ಚು ನೀರು ಹಾಯಿಸುವುದು, ಹೆಚ್ಚಾಗಿ ಮಳೆ / ಪ್ರವಾಹ ಉಂಟಾದಾಗ ತೋಟದಿಂದ ನೀರು ಬಸಿದು ಹೋಗದಿರುವದು, ಸರಿಯಾದ ಸಮಯಕ್ಕೆ ಸಿಂಪರಣೆ ಮಾಡದಿರುವುದು ರೋಗ ಹೆಚ್ಚಾಗಲು ಕಾರಣಗಳಾಗಿವೆ.
ನಿರ್ವಹಣಾ ಕ್ರಮಗಳು :
ನೀರು ಚೆನ್ನಾಗಿ ಬಸಿದು ಹೋಗುವಂತ ಮಣ್ಣಿನಲ್ಲಿ ಬಾಳೆ ಬೆಳೆಯುವುದು ಸೂಕ್ತ, ಶಿಫಾರಿಸಿದ ಅಂತರದಲ್ಲಿ ನಾಟಿ ಮಾಡಬೇಕು, ರೋಗಪೀಡಿತ ಒಣಗಿದ ಎಲೆಗಳನ್ನು ಎರಡು ಮತ್ತು ಮೂರು ತಿಂಗಳಿಗೊಮ್ಮೆ ಕೊಯ್ದು ಬಾಳೆ ಸಾಲುಗಳ ಮದ್ಯೆ ಯಾವುದೇ ಕಾರಣಕ್ಕೂ ಹಾಕಬಾರದು ಮತ್ತು ಗಿಡಗಳಿಗೆ ಸುತ್ತಬಾರದು, ರೋಗ ಕಂಡು ಬಂದಾಗ, ಪ್ರೋಪಿಕೋನಜೋಲ್ @ 0.5 ಮಿ.ಲೀ. ಮತ್ತು ಪೆಟ್ರೋಲಿಯಂ ಆಧಾರಿತ ಮಿನರಲ್ ಎಣ್ಣೆ @ 10 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ 20-25 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪರಣೆ ಮಾಡಬೇಕು (ರೋಗದ ತೀವ್ರತೆಗೆ ಅನುಗುಣವಾಗಿ).
ಗಡ್ಡೆ ಕೊಳೆ ರೋಗ ಅಥವಾ ಸುಳಿ ಕೊಳೆ ರೋಗ
ಈ ರೋಗವು ನಾಟಿ ಮಾಡಿದ ಗಡ್ಡೆಯ ಮೇಲೆ ಹೊಸ ಚಿಗುರು ಬಂದಾಗ ತುದಿಯು ಕಪ್ಪಾಗಿ ಕೊಳೆಯುತ್ತದೆ. ನಂತರ ಈ ಗಡ್ಡೆಯು ಚಿಗುರುವುದಿಲ್ಲ. ರೋಗಕ್ಕೆ ತುತ್ತಾದ ಗಿಡಗಳು ಬೆಳವಣಿಗೆ ಕುಂಠಿತಗೊಂಡು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಂತರ ಎಲೆಗಳು ಪೂತರ್ಿ ಒಣಗಿ ಗೊನೆಯು ಗಿಡದ ಬಡ್ಡೆ ಬಾಗುತ್ತದೆ ಮತ್ತು ಗಿಡಗಳು ಮುರಿದು ಬೀಳುತ್ತವೆ. ರೋಗಕ್ಕೆ ತುತ್ತಾದ ಗಿಡದ ಕಾಂಡವು ಸೀಳುತ್ತದೆ. ಜೊತೆಗೆ ಕಾಂಡವು ಕೊಳೆಯುತ್ತದೆ. ಕಾಂಡವು ಕಂದು ಬಣ್ಣದಿಂದ ಕೂಡಿರುತ್ತದೆ. ಮತ್ತು ಕಾಂಡವು ಉದ್ದವಾಗಿ ಸೀಳಿರುವುದು ಕಂಡುಬರುತ್ತದೆ. ರೋಗಕ್ಕೆ ತುತ್ತಾದ ಕಾಂಡವನ್ನು ಕೊಯ್ದು ನೋಡಿದಾಗ ಹಳದಿ ಮಿಶ್ರಿತ ಕಂದು ಅಥವಾ ಕಂದು ಬಣ್ಣದ ಭಾಗವನ್ನು ಕಾಣಬಹುದು. ಆಮೇಲೆ ಆ ಭಾಗವು ಪೂತರ್ಿ ಕೊಳೆತು ಹೋಗುತ್ತದೆ ನಂತರ ಗಿಡವು ಪೂತರ್ಿ ಒಣಗಿ ಸಾಯುತ್ತದೆ.
ನಿರ್ವಹಣಾ ಕ್ರಮಗಳು
ರೋಗರಹಿತ ಸಸಿ / ಗಡ್ಡೆಗಳನ್ನು ನಾಟಿ ಮಾಡುವುದು. ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣಿನಲ್ಲಿ ಗಿಡಗಳನ್ನು ನಾಟಿ ಮಾಡಬೇಕು. ರೋಗರಹಿತ ಗಡ್ಡೆಗಳನ್ನು ತಾಮ್ರದ ಆಕ್ಸಿಕ್ಲೋರೈಡ್ 4 ಗ್ರಾಂ. ಜೊತೆಗೆ ಸ್ಟ್ರೆಪ್ಟೋಸೈಕ್ಲಿನ್ 0.3 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ 45 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು. ನಂತರ ಗಿಡದ ಬುಡದ ಸುತ್ತಲೂ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ. ಜೊತೆಗೆ ಸ್ಟ್ರೆಪ್ಟೋಸೈಕ್ಲಿನ್ 0.3 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ತಿಂಗಳಿಗೊಮ್ಮೆ 3 ಸಲ (ಡ್ರೆಚಿಂಗ್) ಗಿಡದ ಬುಡದ ಸುತ್ತಲೂ ದ್ರಾವಣದಿಂದ ತೊಯಿಸಬೇಕು.