ಟೊಣಪಿನಾಥ ದೇವಾಲಯದ ಸಾಂಸ್ಕೃತಿಕ ಭವನದಲ್ಲಿ ಕೊರೋನಾ ನಿರ್ಮೂಲನೆಗೆ ನಾಗರಿಕರ ಸ್ಪಂದನೆ ಅಗತ್ಯ
ಆನಂದ ಅದಗೊಂಡ ಹೇಳಿಕೆ : ಕೊರೋನಾ ನಿರ್ಮೂಲನ ಸಾರ್ವಜನಿಕ ಸಭೆ
ಮಹಾಲಿಂಗಪುರ 22: ಕೊರೋನಾ ಎರಡನೇ ಅಲೆ ದೇಶವನ್ನೇ ಆವರಿಸಿದ್ದು ಇದರ ನಿರ್ಮೂಲನೆಗೆ ಇಲಾಖೆಗಳ ಜೊತೆ ಪ್ರತಿಯೊಬ್ಬ ನಾಗರಿಕನ ಸಹಕಾರ, ಸ್ಪಂದನೆ ಅಗತ್ಯ ಎಂದು ಸ್ಥಳೀಯ ಪೋಲೀಸ್ ಠಾಣಾಧಿಕಾರಿ ಆನಂದ ಅದಗೊಂಡ ಹೇಳಿದರು.
ಸ್ಥಳೀಯ ಟೊಣಪಿನಾಥ ದೇವಾಲಯದ ಸಾಂಸ್ಕೃತಿಕ ಭವನದಲ್ಲಿ ಪುರಸಭೆ, ಪೋಲೀಸ್, ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಕರೆದಿದ್ದ ಸಭೆಯಲ್ಲಿ ಕೊರೋನಾ ನಿರ್ಮೂಲನಾ ಆದೇಶಗಳ ಬಗ್ಗೆ ವಿವರಿಸುತ್ತಾ, ಮೇ 4 ರವರೆಗಿನ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವೃದ್ಧರು ಮತ್ತು ಮಕ್ಕಳು ಮನೆಯಲ್ಲಿಯೇ ಸುರಕ್ಷಿತವಾಗಿರಲಿ. ಅಗತ್ಯವಸ್ತುಗಳ ಹಾಗೂ ವೈದ್ಯಕೀಯ ಕಾರಣದ ಹೊರತಾಗಿ ರಸ್ತೆಗಿಳಿಯಬೇಡಿ.ಕೊರೋನಾ ದೃಢಪಟ್ಟ ವ್ಯಕ್ತಿ ಮತ್ತು ಕುಟುಂಬದವರಿಂದ ಇಡೀ ಸಮುದಾಯಕ್ಕೆ ರೋಗ ಹರಡದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ಮಹಾಲಿಂಗಪುರದಲ್ಲಿ 30ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಮಾಸ್ಕ್ ರಹಿತ ಅನಾವಶ್ಯಕ ತಿರುಗಾಟ ಮತ್ತು 3 ಕ್ಕಿಂತ ಹೆಚ್ಚು ಜನ ಗುಂಪುಗೂಡುವಿಕೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಎಂ.ಬಿ.ಗೋಣಿ ಮಾತನಾಡಿ, ಕೆಮ್ಮು, ನೆಗಡಿ, ಜ್ವರ ಇವುಗಳನ್ನು ನಿರ್ಲಕ್ಷಿಸದೆ ಕೊರೋನಾ ಪರೀಕ್ಷೆಗೆ ಒಳಪಟ್ಟು, 1976 ಕ್ಕಿಂತಲೂ ಮುಂಚೆ ಜನಿಸಿದವರು ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೇಳಿದರು.
ಪುರಸಭಾ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಮಾಜಿ ಪುರಸಭಾ ಸದಸ್ಯ ನಜೀರ್ ಅತ್ತಾರ್, ಪತ್ರಕರ್ತರಾದ ಜಯರಾಮ ಶೆಟ್ಟಿ, ಚಂದ್ರಶೇಖರ ಮೋರೆ ಮಾತನಾಡಿದರು.
ಎಸ್.ಎನ್.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ರವಿ ಹಲಸಪ್ಪಗೋಳ ನಿರೂಪಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರು, ಗಣ್ಯರು, ವರ್ತಕರು ಹಾಜರಿದ್ದರು.
ಪ್ರತಿ ದಿನ ರಾತ್ರಿ 9 ರಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಪ್ರತಿ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕಫ್ರ್ಯೂ ಇರುತ್ತದೆ.
ಅನುಮತಿ ಇದೆ : ಕೊರೋನಾ ನಿಯಮಾವಳಿಗೊಳಪಟ್ಟು ಮಾಸ್ಕ್ ಧರಿಸಿ ಕಿರಾಣಿ ವ್ಯಾಪಾರ, ಹಾಲು, ಔಷಧ ಅಂಗಡಿ, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗಳು, ಕೈಗಾರಿಕೆ, ಕೆಎಸ್ ಆರ್ ಟಿಸಿ ಬಸ್ ಸೌಲಭ್ಯ,ಪಡಿತರ ವಿತರಣೆ, 50 ಜನ ಮೀರದಂತೆ ಮದುವೆ, 20 ಜನ ಮೀರದಂತೆ ಅಂತ್ಯಸಂಸ್ಕಾರ, ಜಿಲ್ಲೆ ಮತ್ತು ಅಂತರ್ ಜಿಲ್ಲಾ ಪ್ರಯಾಣ. ಲಾಡ್ಜ್, ಬ್ಯಾಂಕ್, ಎಟಿಎಂ.ಗೂಡ್ಸ್ ಗಾಡಿಗಳು, ಆಟೋ ಇತ್ಯಾದಿ.
ಅನುಮತಿ ಇಲ್ಲ: ಶಾಲಾ ಕಾಲೇಜು, ಕೋಚಿಂಗ್ ಕ್ಲಾಸ್, ಬಟ್ಟೆ ಅಂಗಡಿ,ಬಂಗಾರದ ಅಂಗಡಿಗಳು ಇರುವುದಿಲ್ಲ. ಮಸೀದಿ, ಮಂದಿರ,ಚರ್ಚ್ ಗಳಲ್ಲಿ ಮೌಲ್ವಿ, ಪೂಜೇರಿ, ಪಾದ್ರಿ ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶವಿಲ್ಲ, ಪ್ರತಿ ಮಂಗಳವಾರ ನಡೆಯುತ್ತಿದ್ದ ವಾರದ ಸಂತೆ ಹಾಗೂ ಶಾಂತಿನಿಕೇತನ ಬಡಾವಣೆಯ ಶನಿವಾರದ, ಬಸವನಗರದ ಶುಕ್ರವಾರದ ಸಂತೆಗಳಿರುವುದಿಲ್ಲ. ಖಾನಾವಳಿ, ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ.ಸಾರ್ವಜನಿಕ ಜಾತ್ರೆ ಸಭೆ, ಸಮಾರಂಭ, ಚಲನಚಿತ್ರ,ನಾಟಕ,ಈಜು ಕೊಳ,ಜಿಮ್, ಪಾರ್ಟಿ, ಮಾಲ್,ಉದ್ಯಾನವನ, ಯೋಗ ಕೇಂದ್ರ, ಕ್ರೀಡಾ ಚಟುವಟಿಕೆ, ಖಾಸಗಿ ಕೋಚಿಂಗ್ ಇತ್ಯಾದಿ ಇರುವುದಿಲ್ಲ.