ಎಸ್ಸಿ, ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಎಐಡಿಎಸ್ಒ ಪ್ರತಿಭಟನೆ
ಲೋಕದರ್ಶನ ವರದಿ
ಧಾರವಾಡ, ಆ. 3: ಧಾರವಾಡದ ಎಸ್ಸಿ/ಎಸ್ಟಿ ನಂ. 6 ಬಾಲಕರ ಹಾಸ್ಟೆಲ್ನ ದುಸ್ಥಿತಿಯನ್ನು ಖಂಡಿಸಿ, ಅಲ್ಲಿನ ವಿದ್ಯಾರ್ಥಿಗಳನ್ನು ತಕ್ಷಣವೇ ಬೇರೆ ಹಾಸ್ಟೆಲ್ಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಶಿಕ್ಷಣ ನಗರಿ ಧಾರವಾಡಕ್ಕೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದರೂ, ಸಮರ್ಕ ವಸತಿ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ಸಿ/ಎಸ್ಟಿ ನಂ. 6 ಬಾಲಕರ ಹಾಸ್ಟೆಲ್ನಲ್ಲಿ ಸ್ವಚ್ಛತೆ ಇಲ್ಲದಿರುವುದು, ಶೌಚಾಲಯಗಳ ದುಸ್ಥಿತಿ, ವಿದ್ಯುತ್ ಸಮಸ್ಯೆ, ಹಾಳಾದ ಕೊಠಡಿಗಳು, ಮುರಿದ ಬಾಗಿಲು ಹಾಗೂ ಕಿಟಕಿಗಳು, ಒಂದೇ ಕೊಠಡಿಯಲ್ಲಿ ಸುಮಾರು 25 ವಿದ್ಯಾರ್ಥಿಗಳನ್ನು ಇರಿಸಿರುವುದು ಸೇರಿದಂತೆ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆಯಿದೆ ಎಂದು ದೂರಿದರು. ಹಾಳಾದ ಹಾಸಿಗೆಗಳು ಹಾಗೂ ಇತರೆ ಸಮಸ್ಯೆಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಹಾಸ್ಟೆಲ್ನಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಕೂಡಲೇ ಬೇರೆ ಹಾಸ್ಟೆಲ್ಗೆ ಸ್ಥಳಾಂತರಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ಬಳಿಕ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಜಗದೀಶ ಎಸ್. ಹೆಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅಧಿಕಾರಿಗಳು ಒಂದು ವಾರದೊಳಗೆ ವಿದ್ಯಾರ್ಥಿಗಳನ್ನು ಬೇರೆ ಹಾಸ್ಟೆಲ್ಗೆ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾ ಅಧ್ಯಕ್ಷೆ ಸಿಂಧೂ ಕೌದಿ, ಜಿಲ್ಲಾ ಸಂಘಟನಾಕಾರ ಸಿದ್ದಲಿಂಗ ಚಿಪ್ಪಲಕಟ್ಟಿ, ವಿದ್ಯಾರ್ಥಿಗಳಾದ ಪ್ರಶಾಂತ ದೇವಗಿರಿ, ಲಕ್ಷ್ಮಣ ನರಸಣ್ಣವರ, ಯಲ್ಲಪ್ಪ ಸತಾಶಿನಿ, ಪ್ರಕಾಶ ಚವ್ಹಾಣ್, ಪ್ರದೀಪ್ ಲಮಾಣಿ, ಗಣೇಶ್ ಹರಿಕೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.