ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಎಐಸಿಸಿಟಿಯು ಯಿಂದ ಜೈಲ್ ಭರೋ ಚಳವಳಿ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಎಐಸಿಸಿಟಿಯು ಯಿಂದ ಜೈಲ್ ಭರೋ ಚಳವಳಿ

            ರಾಯಚೂರು  30: ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳು ಹಿಂಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಬದಲಾಯಿಸಿದ್ದನ್ನು ಖಂಡಿಸಿ ಎಐಸಿಸಿಟಿಯು ವತಿಯಿಂದ ನಗರದಲ್ಲಿ ಜೈಲ್ ಭರೋ ಚಳವಳಿ ಮಾಡಲಾಯಿತು. ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಸಂಘದ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೈಲ್ ಕಡೆ ಹೊರಟಿದ್ದ ಚಳುವಳಿಗಾರರನ್ನು  ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ನಾಲ್ಕು ಕಾರ್ಮಿಕ ಸಂಹಿತೆಯನ್ನು ಜಾರಿಗೆ ತಂದು ಶೋಷಣೆ ಮಾಡುತ್ತಿದೆ. ಇದು ಬಂಡವಾಳ ಶಾಹಿಪರ ಕಾನೂನಾಗಿದೆ ಹಳೆಯ ಕಾರ್ಮಿಕ ಕಾನೂನುಗಳನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

           ನಾಲ್ಕು ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಅನೇಕ ಹೋರಾಟಗಳನ್ನು ಮಾಡಿದರೂ ಸರ್ಕಾರ ಕಿವಿಗೊಡದೇ ಏಕ ಪಕ್ಷೀಯವಾಗಿ ಜಾರಿಗೊಳಿಸಿದೆ ಎಂದು ದೂರಿದರು. ಎಐಸಿಸಿಟಿಯು ವತಿಯಿಂದ ಜಿಲ್ಲಾಧ್ಯಂತ ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರ ಭಾಗವಾಗಿ ಪ್ರಚಾರಾಂದೋಲನ ಭಾಗವಾಗಿ ಇಂದು ರಾಯಚೂರು ನಗರದಲ್ಲಿ ಜೈಲ್ ಬರೋ ಚಳುವಳಿ ಮೂಲಕ ಫೆಬ್ರವರಿ 12 ರ ಮುಷ್ಕರ ಯಶಸ್ವಿಗೊಳಿಸಲು ಕರೆ ನೀಡಲಾಯಿತು. ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ ಜೈಲ್ ಬರೋ ಚಳುವಳಿಯ ನೇತೃತ್ವ ವಹಿಸಿದ್ದರು. ಚಳುವಳಿಯಲ್ಲಿ ಕಾರ್ಮಿಕ ಮುಖಂಡರಾದ ಜಗದೀಶ್, ನಿಸಾರ್ ಅಹಮದ್, ಭೀಮಣ್ಣ ಉಡುಮಗಲ್, ಮಾರಣ್ಣ ಆಶಾಪುರ, ಚಾಂದ್ ಪಾಷಾ, ಅನಿಫ್ ಅಬಕಾರಿ, ಹನುಮಪ್ಪ, ಮಲ್ಲೇಶ್, ಯಲ್ಲಪ್ಪ ಸೇರಿದಂತೆ ಅನೇಕರು ಚಳುವಳಿಯಲ್ಲಿದ್ದರು. 


ಸುದ್ದಿ ಓದಿ