ಬೆಳಗಾವಿ

ಸಮಕಾಲೀನ ಸಮಸ್ಯೆಗಳಿಗೆ ಸಂಶೋಧನಾ ದೃಷ್ಟಿಕೋನ ಅಗತ್ಯ: ಉಮೇಶ್ ಬಾಳಿ

ಸಮಕಾಲೀನ ಸಮಸ್ಯೆಗಳಿಗೆ ಸಂಶೋಧನಾ ದೃಷ್ಟಿಕೋನ ಅಗತ್ಯ: ಉಮೇಶ್ ಬಾಳಿ


ಸವದತ್ತಿ 06 :  ಭಾರತದ ಪ್ರಚಲಿತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಲಿಂಗ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಗಳಿಗೆ ಹೊಸ ದೃಷ್ಟಿಕೋನ ಹಾಗೂ ಪರಿಹಾರಗಳನ್ನು ಕಂಡುಕೊಳ್ಳಲು ಇಂತಹ ಸಮ್ಮೇಳನಗಳು ದಿಕ್ಸೂಚಿಯಾಗಬೇಕು ಎಂದು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಉಮೇಶ ಬಾಳಿ ಅಭಿಪ್ರಾಯಪಟ್ಟರು. 

ಸ್ಥಳೀಯ ಕೆ.ಎಲ್‌.ಇ. ಸಂಸ್ಥೆಯ ಎಸ್‌.ವಿ.ಎಸ್‌. ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತದ ಸಮಕಾಲೀನ ಸಮಸ್ಯೆಗಳು: ಸಾಹಿತ್ಯ, ಸಮಾಜ ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರದಲ್ಲಿ ಸಂಶೋಧನಾ ದೃಷ್ಟಿಕೋನ  ಎಂಬ ವಿಷಯದ ಕುರಿತಾದ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಂಶೋಧನೆಗಳು ಕೇವಲ ಸಾಂಪ್ರದಾಯಿಕವಾಗಿರದೆ, ವಾಸ್ತವದ ತಳಹದಿಯ ಮೇಲೆ ಚರ್ಚಿತವಾಗಬೇಕು. ಅವುಗಳ ಸಾಧಕ-ಬಾಧಕಗಳನ್ನು ಪ್ರಜಾತಾಂತ್ರಿಕ ನೆಲೆಯಲ್ಲಿ ವಿಶ್ಲೇಷಿಸಿ, ಸಮಾಜಕ್ಕೆ ಹಾಗೂ ಆಡಳಿತ ವ್ಯವಸ್ಥೆಗೆ ಹೊಸ ಸಂದೇಶವನ್ನು ನೀಡುವಂತಾಗಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕೆ. ಸೆಂಥಿಲ್ ಕುಮಾರ್ ಮಾತನಾಡಿ, ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸಮಾಜಕ್ಕೆ ನೇರವಾಗಿ ಉಪಯುಕ್ತವಾಗುವ ಹೊಸ ಹಾಗೂ ಅರ್ಥಪೂರ್ಣ ಸಂಶೋಧನಾ ಕೊಡುಗೆಗಳನ್ನು ನೀಡಬೇಕು. ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವಲ್ಲಿ ಸಂಶೋಧನೆಗಳ ಪಾತ್ರ ಹಿರಿದಾದದ್ದು ಎಂದರು.ಕಾರ್ಯಕ್ರಮದ ನಿಮಿತ್ತ ಆಹ್ವಾನಿಸಲಾದ ಸಂಶೋಧನಾ ಲೇಖನಗಳ ವಿಶೇಷ ಜರ್ನಲ್ ಅನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು.  


ಸುದ್ದಿ ಓದಿ