ಮಹಲಿಂಗಪುರ

36 ಲಕ್ಷ ಕೊಟ್ಟು ಜೋಡೆತ್ತು ಖರೀದಿಸಿದ ಪುರಸಭೆ ಅಧ್ಯಕ್ಷ !

36 ಲಕ್ಷ ಕೊಟ್ಟು ಜೋಡೆತ್ತು ಖರೀದಿಸಿದ ಪುರಸಭೆ ಅಧ್ಯಕ್ಷ !

ಯಲ್ಲನಗೌಡರಿಗೆ ತೆರಬಂಡಿ ಎತ್ತುಗಳ ಕ್ರೇಜ್ ! ಕಾರ್‌ಗಿಂತ ದುಬಾರಿ ಎತ್ತುಗಳು ! 

*ವರದಿ: ಹನಮಂತ ನಾವಿ  

ಮಹಾಲಿಂಗಪುರ : ಪಟ್ಟಣದ ಗೌಡರೆನಿಸಿದ ಯಲ್ಲನಗೌಡ ಪಾಟೀಲ ಪುರಸಭೆ ಸದಸ್ಯರಾಗಿ, ಇತ್ತೀಚೆಗೆ ಅಧ್ಯಕ್ಷರಾಗಿ ಆಯ್ಕೆಯಾದರೂ ತಂದೆ ಬಸಗೌಡರು ಹೊಂದಿದ್ದ ಎತ್ತುಗಳನ್ನು ಮೇಯಿಸುವ ಹೆಮ್ಮೆಯ ಹವ್ಯಾಸವನ್ನು ಪುತ್ರ ಯಲ್ಲನಗೌಡರು ಮರೆಯದೇ ಮುಂದುವರೆಸಿದ್ದಾರೆ. ತೆರಬಂಡಿ ಎತ್ತುಗಳನ್ನು ಮೇಯಿಸಿ ಸ್ಪರ್ಧೆಯಲ್ಲಿ ಓಡಿಸಿ ಗೆದ್ದು ಹೆಮ್ಮೆ ಪಡುವ ಸಂಪ್ರದಾಯವನ್ನು ಯಲ್ಲನಗೌಡ ಪಾಟೀಲ ಸಂಭ್ರಮಿಸುತ್ತಿದ್ದಾರೆ.  

ಕುಟುಂಬದ ಕ್ರೇಜಿ ಸಂಪ್ರದಾಯದಂತೆ ಪ್ರತಿ ವರ್ಷ ಪಟ್ಟಣದಲ್ಲಿ ತೆರಬಂಡಿ ಸ್ಪರ್ಧೆ ಏರಿ​‍್ಡಸುತ್ತ ಬಂದಿದ್ದಾರೆ. ಹವ್ಯಾಸಿಗಳನ್ನು ಒಗ್ಗೂಡಿಸಿ, ಸಂಪನ್ಮೂಲ ಕ್ರೋಢೀಕರಿಸಿ ಇತ್ತೀಚೆಗೆ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆಯನ್ನು ಅದ್ದೂರಿಯಾಗಿ ಏರಿ​‍್ಡಸಿ ದಾಖಲೆ ನಿರ್ಮಿಸಿದ್ದರು. 

ಕಾರ್‌ಗಿಂತ ದುಬಾರಿ ಎತ್ತುಗಳು: 

ಮೂರು ಲಕ್ಷ ಕೊಟ್ಟರೆ ಪುಟ್ಟ ಕಾರ್ ಬರುತ್ತದೆ. ಆದರೆ ಕಾರ್‌ಗಿಂತ ದುಬಾರಿ ಎತ್ತುಗಳು ಗೌಡರ ಮನೆಯಲ್ಲಿವೆ. ಈಗಾಗಲೇ ಖರೀದಿಸಿದ 11 ಲಕ್ಷ ಮತ್ತು 14 ಲಕ್ಷಕ್ಕೆ ಖರೀದಿದ ಎರಡು ತೆರಬಂಡಿ ಎತ್ತುಗಳು ಮನೆಯಲ್ಲಿವೆ. ಇತ್ತೀಚೆಗೆ ಗೌಡರು ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಸಂಭ್ರಮದಲ್ಲಿ ಮತ್ತೆ ದಾಖಲೆ ಬೆಲೆಗೆ ಜೋಡೆತ್ತು ಖರೀದಿಸಿ ಗಮನ ಸೆಳೆದಿದ್ದಾರೆ. ಅಕ್ಕಿಮರಡಿಯ ಕುಮಾರ ಬೋರಡ್ಡಿ ಅವರ ಜೋಡೆತ್ತುಗಳನ್ನು ಬರೊಬ್ಬರಿ 36 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ಅವರೀಗ 61 ಲಕ್ಷ ಬೆಲೆಬಾಳುವ ಎತ್ತುಗಳ ಮಾಲೀಕರು. ಅದರಲ್ಲಿ 20 ಕಾರ್ ಖರೀದಿಸಬಹುದು.  

ಮೇಯಿಸುವುದು ಕೂಡ ದುಬಾರಿ: 

ತೆರಬಂಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಲಕ್ಷಾಂತರ ರೂ. ಬಹುಮಾನ ಗೆದ್ದು ತರುತ್ತವೆ. ಆದರೆ ಅವುಗಳನ್ನು ಮೇಯಿಸಿ ತಯಾರಿಗೊಳಿಸಲು ಲಕ್ಷಾಂತರ ಖರ್ಚು ಮಾಡಬೇಕಾಗುತ್ತದೆ. ಅವುಗಳನ್ನು ಸಾಮಾನ್ಯ ಎತ್ತುಗಳಂತೆ ಸಾಕಲು ಸಾಧ್ಯವಿಲ್ಲ. ಅವುಗಳಿಗೆ ಪ್ರತ್ಯೇಕ ಶೆಡ್, ಕೆಳಗೆ ಮ್ಯಾಟ್, ನೆತ್ತಿ ಮೇಲೆ 4 ಬಲ್ಬ್‌, ಒಂದು ಗಾಳಿಗಾಗಿ 2 ಫ್ಯಾನ್, ಪರ್ಯಾಯ ವಿದ್ಯುತ್‌ಗೆ 1 ಇನ್ವರ್ಟರ್ ವ್ಯವಸ್ಥೆ ಇರಬೇಕು. ಆಹಾರಕ್ಕೆ ನಿತ್ಯ ಹಾಲು, ಮೊಟ್ಟೆ, 5 ಧನ್ಯಗಳ ಹಿಟ್ಟಿನ ಪೌಷ್ಠಿಕ ಮುಸುರೆ ನೀರು, ಸಜ್ಜಕ, ಸತ್ವಯುತ ಮತ್ತು ಶಕ್ತಿಯುತ ಮೇವು, ವ್ಯವಸ್ಥಿತ ವೈದ್ಯಕೀಯ ಪರೀಕ್ಷೆ ಹೀಗೆ ನಿತ್ಯ ಸಾವಿರಾರು ರೂ. ಖರ್ಚಾಗುತ್ತದೆ. ಓರ್ವ ಕೂಲಿಕಾರನ ಸಂಬಳ ಸೇರಿ ಜೋಡೆತ್ತುಗಳನ್ನು ನಿರ್ವಹಿಸಲು ತಿಂಗಳಿಗೆ 30 ಸಾವಿರ ರೂ. ಬೇಕಾಗುತ್ತದೆ. ಆದರೂ ಅಣ್ಣತಮ್ಮಂದಿರು ಪ್ರೀತಿಯಿಂದ ಜೋಡೆತ್ತುಗಳನ್ನು ಮೇಯಿಸುತ್ತಾರೆ.  



ಸುದ್ದಿ ಓದಿ