ಅಪಪ್ರಚಾರ ಮಾಡುವವರಿಗೆ ಸೂಕ್ತ ಸಂದರ್ಭದಲ್ಲಿ ಉತ್ತರ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ, 10: ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಸೂಕ್ತ ಸಂದರ್ಭದಲ್ಲಿ ಅವಕಾಶ ಸಿಕ್ಕಾಗ ಉತ್ತರ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತಿಹಾಸದ ಅರಿವು ಹಾಗೂ ಜ್ಞಾನದ ಕೊರತೆಯಿಂದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಎಷ್ಟು ದಿನ ಅಪಪ್ರಚಾರ ಮಾಡುತ್ತಾರೋ ಮಾಡಲಿ. ಕಳೆದ 30ಹಿ40 ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಬಂದಿರುವ ನಾವು ಅಂತಹವರಿಗೆ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತೇವೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಬಳ್ಳಾರಿ ನಾಲಾ ಸಮಸ್ಯೆ ಅಭಿವೃದ್ಧಿಗೆ ಹಿನ್ನಡೆ
ಬಳ್ಳಾರಿ ನಾಲಾ ಸಮಸ್ಯೆಯು ಅಭಿವೃದ್ಧಿ ಹಾಗೂ ರೈತರ ಆರ್ಥಿಕ ಪ್ರಗತಿಗೆ ದೊಡ್ಡ ಹಿನ್ನಡೆಯಾಗಿದೆ. ನಾಲಾ ಕಿರಿದಾಗಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸರ್ಕಾರದಿಂದ ವರದಿ ಕೇಳಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಸಚಿವರು ತಿಳಿಸಿದರು.
ನವೆಂಬರ್ ಮೊದಲ ವಾರದಲ್ಲಿ ಉದ್ಘಾಟನೆ, ಕಾಮಗಾರಿಗೆ ಚಾಲನೆ
ಜಿಲ್ಲಾಧಿಕಾರಿಗಳ ಕಚೇರಿಯ ಉದ್ಘಾಟನೆ ಹಾಗೂ ಬೆಳಗಾವಿ ಮೇಲ್ಸೇತುವೆ ಕಾಮಗಾರಿಗೆ ನವೆಂಬರ್ ಮೊದಲ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ ನೀಡಲು ಸಿಎಂಗೆ ಮನವಿ
ಬೆಳಗಾವಿ ರಾಜ್ಯೋತ್ಸವಕ್ಕೆ ವಿಶೇಷ ಅನುದಾನ ನೀಡಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ಹೆಚ್ಚಿನ ಅನುದಾನ ಬಿಡುಗಡೆಯಾದರೆ ರಾಜ್ಯೋತ್ಸವ ಆಚರಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕನ್ನಡಾಭಿಮಾನಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಸೂಕ್ತ ನಾಯಕತ್ವ ಹಾಗೂ ಉತ್ತಮ ನಿರ್ವಹಣೆ ಅಗತ್ಯ. ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ರಾಜ್ಯೋತ್ಸವಕ್ಕೆ ಆಗಮಿಸುವ ಎಲ್ಲ ಕನ್ನಡಾಭಿಮಾನಿಗಳಿಗೂ ಊಟದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.