ಗ್ರಾಮೀಣ ಯುವ ರೈತ ಕೃಷಿ ಕ್ಷೇತ್ರದ ಸಾಧಕ ಕೃಷಿ ಕ್ಷೇತ್ರದಲ್ಲಿನ ಆಧುನಿಕ ತಂತ್ರಜ್ಞಾನ ಅರಿಯಲು ಇಸ್ರೇಲ್ ದೇಶಕ್ಕೆ ತೆರಳಿದ ರೈತ
ಮಹಾಲಿಂಗಪುರ : ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಈ ಜಗವೆಲ್ಲ ಎಂಬ ಹಿರಿಯರ ನಾನುಡಿಯಂತೆ ನಮ್ಮ ದೇಶದ ಬೆನ್ನೆಲುಬು ರೈತ. ಇವತ್ತಿನ ರೈತ ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ ಕೃಷಿ ಮಾಡುತ್ತಾ ವೈವಿಧ್ಯಮಯ ಬೆಳೆಗಳನ್ನು ಬೆಳೆದು ವ್ಯವಸಾಯದಲ್ಲಿ ಭೇಷ್ ಎನಿಸಿಕೊಂಡಿದ್ದಾರೆ.ಅಂತಹ ಕೃಷಿ ಸಾಧಕರಲ್ಲಿ ಸಮೀಪದ ಚಿಮ್ಮಡ ಗ್ರಾಮದ ಯುವ ರೈತ ರುದ್ರಪ್ಪ ಯಲ್ಲಪ್ಪ ಹಳಮನಿ ನಿತ್ಯ ಒಂದಿಲ್ಲೊಂದು ಹೊಸತನದೊಂದಿಗೆ ಕೃಷಿಯಲ್ಲಿ ಹೊಸ ಆವಿಷ್ಕಾರವನ್ನು ಹಾಗೂ ತಂತ್ರಜ್ಞಾನವನ್ನು ಅರಿಯಲು ಇಸ್ರೇಲ್ ದೇಶಕ್ಕೆ ಕೃಷಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.ಕ್ರಿಯಾಜೀನ್ ಅಗ್ರಿ ಅಂಡ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಯುವ ಉತ್ಸಾಹಿ ರೈತ ಉದ್ಯಮಿಗಳನ್ನು ಕೃಷಿಯಲ್ಲಿನ ತಾಂತ್ರಿಕತೆ, ವೈವಿಧ್ಯಮಯ ಬೆಳೆಗಳ ಬೆಳೆಯುವ ಬಗೆ,ಅತ್ಯಾಧುನಿಕ ಸಲಕರಣೆಗಳು, ಆಧುನಿಕ ಕೃಷಿ ಪದ್ಧತಿ, ಹನಿ ಮತ್ತು ತುಂತುರು ನೀರಾವರಿ, ಬೆಳೆಗಳಿಗೆ ಪೋಷಕಾಂಶಗಳು ಹಾಗೂ ಜೈವಿಕ ಗೊಬ್ಬರ, ವ್ಯವಸಾಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಂತಾದ ವಿಷಯಗಳನ್ನು ಇಸ್ರೇಲ್ ದೇಶದ ಸಾಧಕ ರೈತರೊಂದಿಗೆ ಸಂವಾದದ ಮುಖ್ಯೆನ ಕಡಿಮೆ ಪ್ರದೇಶದಲ್ಲಿಯೂ ಕೂಡ ಹೆಚ್ಚು ಬೆಳೆ ಬೆಳೆಯುವ ಆಧುನಿಕ ಹಾಗೂ ತಾಂತ್ರಿಕ ಕೃಷಿ ಪದ್ಧತಿಯನ್ನು ಹತ್ತು ದಿನಗಳ ಕಾಲ ಪ್ರವಾಸ ಕೈಗೊಂಡು ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅರಿತು ನಮ್ಮ ದೇಶದಲ್ಲಿಯೂ ಯಶಸ್ವಿಯಾಗಿ ಅಳವಡಿಸಲು ಯುವ ರೈತರ ತಂಡ ಮುಂದಾಗಿದೆ.ಪ್ರಗತಿಪರ ರೈತರಾದ ರುದ್ರಪ್ಪ ವಾಣಿಜ್ಯ ಪದವೀಧರರಾದರೂ ಕೃಷಿಯನ್ನೇ ನಂಬಿ ಕೃಷಿ ಉದ್ದಿಮೆದಾರರಾಗಿಯೂ ಸೈ ಎನಿಸಿಕೊಂಡಿದ್ದಾರೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ ಮುಂತಾದ ಕೃಷಿ ಸಂಬಂಧಿತ ಔಷಧಿಗಳನ್ನು ಪೂರೈಸುವುದರ ಮೂಲಕ ಹಲವಾರು ರೈತರಿಗೆ ಸಹಕಾರಿಯಾಗಿದ್ದಾರೆ. ಈ ಹಿಂದೆ ಅನೇಕ ದೇಶಗಳನ್ನು ಸುತ್ತಿ ಹಲವಾರು ಕೃಷಿ ಸಂಬಂಧಿತ ಜ್ಞಾನವನ್ನು ಪಡೆದಿರುವ ಪ್ರಗತಿಪರ ಯುವ ರೈತ ರುದ್ರಪ್ಪ ಕೃಷಿಯಲ್ಲಿ ತಮ್ಮ ಖುಷಿಯನ್ನು ಕಂಡುಕೊಂಡಿದ್ದಾರೆ ಹಾಗೂ ಇತರೆ ರೈತರಿಗೆ ಸಲಹೆ ಹಾಗೂ ಮಾರ್ಗದರ್ಶನವನ್ನು ಮಾಡುತ್ತಾ ರೈತರ ಪಾಲಿನ ಸಂಜೀವಿನಿಯಾಗಿದ್ದಾರೆ.