ದುಷ್ಕರ್ಮಿಗಳಿಂದ ಮಹಾಲಿಂಗಪುರ ಸಮೀಪದ ತೋಟದ ಮನೆಗೆ ಬೆಂಕಿ, ತಾಯಿ, ಮಗಳು ಸಾವು
ಮಹಾಲಿಂಗಪುರ 16 : ಪಟ್ಟಣ ಸಮೀಪ ಮುಧೋಳ ತಾಲೂಕಿನ ಬೆಳಗಲಿ ಸರಹದ್ದು ಪೆಂಡಾರಿ ಮಲ್ಲಾ ತೋಟದ ಮನೆಯೊಂದಕ್ಕೆ ಮಂಗಳವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪತ್ರಾಸ್ ಶೆಡ್ಡಿನ ಮನೆಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಜೀವಂತ ದಹನಗೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಜೈಬುನ್ ದಸ್ತಗೀರಸಾಬ. ಪೆಂಡಾರಿ (55), ಮಗಳು ಶಬಾನಾ ದಸ್ತಗೀರಸಾಬ. ಪೆಂಡಾರಿ (26) ಈ ದುರ್ಘಟನೆಯಲ್ಲಿ ಮೃತರಾಗಿದ್ದು, ಗಂಡ ದಸ್ತಗಿರಸಾಬ ಮೌ.ಪೆಂಡಾರಿ ಪ್ರತಿ ಶತ 20ರಷ್ಟು, ಮಗ ಸುಭಾನ ದ. ಪೆಂಡಾರಿ ಪ್ರತಿ ಶತ 75ರಷ್ಟು ಇವರಿಗೆ ಸುಟ್ಟ ಗಾಯಗಳಾಗಿವೆ. ಇನ್ನೋರ್ವ ಮೊಮ್ಮಗ ಸಿದ್ದಿಕ ಶೌಕತ್.ಪೆಂಡಾರಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.
ಈ ಕೃತ್ಯವು ಪೂರ್ವನಿಯೋಜಿತವಾಗಿರುವುದಕ್ಕೆ ಪೆಟ್ರೋಲ್ ಇರುವ ಸಿಂಟೇಕ್ಸ್ ಟ್ಯಾಂಕ್, ಸ್ಪ್ರೇ ಮಾಡಲು ತಂದಿರಬಹುದಾದ ಹೊಸ ಪೈಪ್ ಜೋಡಿಸಿರುವ ಮೋಟರ ಅಲ್ಲದೆ ಪಕ್ಕದಲ್ಲಿರುವ ಕರೆಂಟ್ ಕಂಬದಿಂದ ವಿಧ್ಯುತ್ ಸಂಪರ್ಕ ಪಡೆದಿರುವುದು ಈ ಎಲ್ಲ ಕುರುಹುಗಳು ಕೃತ್ಯ ನಡೆದ ಸ್ಥಳದಲ್ಲಿ ದೊರೆತಿರುವುದರಿಂದ, ದಸ್ತಗೀರಸಾಬ ಪೆಂಡಾರಿ ಅವರ ಸಂಪೂರ್ಣ ಪರಿವಾರವನ್ನೇ ಕೊಲೆ ಮಾಡುವ ಉದ್ದೇಶವನ್ನು ಹೊಂದಿರಬಹುದಾಗಿದೆ ಎಂದು ಪೋಲಿಸ್ ಇಲಾಖೆ ಬಲವಾದ ಶಂಕೆ ವ್ಯಕ್ತಪಡಿಸಿದೆ. ಮುಂಜಾನೆ ಘಟನಾ ಸ್ಥಳದಲ್ಲಿ ಶ್ವಾನದಳ, ಬೆಳಗಾವಿ ಜಿಲ್ಲಾ ಎಫ್ ಎಸ್ ಎಲ್ ತಂಡಗಳು ಕೃತ್ಯಕ್ಕೆ ನಡೆದಿರಬಹುದಾದ ಸಾಕ್ಷ್ಯಗಳನ್ನು ಕಲೆ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದು ಕಂಡು ಬಂತು.
ಮೃತ ಶಬಾನಾ ಪಿಎಸ್ಐ ಪರಿಕ್ಷಾರ್ಥಿ/ ಮಗ ಗ್ಯಾಂಗ್ ಮನ್: ಮನೆಯ ಮುಖ್ಯಸ್ಥ ದಸ್ತಗೀರಸಾಬನಿಗೆ ನಾಲ್ಕು ಜನ ಹೆಣ್ಣುಮಕ್ಕಳು ಹಾಗೂ ಒಬ್ಬನೇ ಮಗ. ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದ. 26 ವರ್ಷದ ಮೃತ ಮಗಳು ಇತ್ತಿಚೆಗೆ ನಡೆದ ಪಿಎ??? ಪರೀಕ್ಷೆಯನ್ನು ಬರೆದಿದ್ದಳು.ಮಗ ಸುಬಾನ ಪದವಿ ಶಿಕ್ಷಣದೊಂದಿಗೆ ಕಬ್ಬಿಣ ಗ್ಯಾಂಗ್ ಮನ್ ಸಹ ಆಗಿದ್ದ , ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ಸ್ಥಳೀಯ ವೈದ್ಯರು ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿತೈಷಿಗಳ ಆಕ್ರಂದನ: ಮಹಾಲಿಂಗಪುರ ಪಟ್ಟಣದ ಕೂಗಳತೆಯಲ್ಲಿರುವ ಪೆಂಡಾರಿ (ಮುಸ್ಲಿಂ ) ಪರಿವಾರದ ಸುಮಾರು 20 ಕೃಷಿ ಆಧಾರಿತ ಮನೆತನಗಳು ಹಿಂದು ಮುಸ್ಲಿಂ ಭಾವೈಕ್ಯತೆಯೊಂದಿಗೆ ವಾಸ ಇವೆ. ಈ ಕುಟುಂಬಗಳ ಆಕ್ರಂದನ ಹಾಗೂ ಅಕ್ಕ ಪಕ್ಕದ ಹಿಂದು ಪರಿವಾರಗಳು ಈ ಘೋರತೆಗೆ ಮಮ್ಮಲ ಮರುಗಿ ಇಂತಹ ಕೃತ್ಯ ನಡೆಯಬಾರದಿತ್ತು ಎಂದು ಕಣ್ಣಿರು ಹಾಕುತ್ತಿದ್ದಾರೆ. ಬೆಳಗಿನ ಜಾವ ಮಗಳ ಮಗ (ಮೊಮ್ಮಗ) ಶೆಡ್ಡಿನಿಂದ ಕಿರುಚುತ್ತಾ ಹೊರಗೆ ಬಂದ ಸಂದರ್ಭದಲ್ಲಿ ಆಸುಪಾಸಿನಲ್ಲಿರುವವರು ಎಚ್ಚರಗೊಂಡಿದ್ದಾರೆ ಅಷ್ಟರೊಳಗೆ ಭಯಂಕರ ಬೆಂಕಿಯ ಕೆನ್ನಾಲಿಗೆ ಎರಡು ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಇದೊಂದು ಘೋರ ಮತ್ತು ಅಮಾನವೀಯ ಕೃತ್ಯವಾಗಿದ್ದು, ಪೋಲಿಸ್ ಇಲಾಖೆಗೆ ಸವಾಲಾಗಿದೆ.ಆದ್ದರಿಂದ ಪ್ರಾಥಮಿಕ ಹಂತದ ತಣಿಕೆಯಲ್ಲಿ ಐದು ತಂಡಗಳನ್ನು ರಚಿಸಿದ್ದೇವೆ, ಈಗಾಗಲೇ ಸಂಶಯಾಸ್ಪದ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸುತ್ತೇವೆ.
ವಿಕಾಸಕುಮಾರ ಆಯ್ ಜಿ ಪಿ, ಉತ್ತರ ವಲಯ.
ಘಟನಾ ಸ್ಥಳಕ್ಕೆ ಆಯ್ ಜಿ ಪಿ, ಉತ್ತರ ವಲಯದ ವಿಕಾಸಕುಮಾರ, ಎಸ್ಪಿ ಅಮರನಾಥ ರೆಡ್ಡಿ, ಉಪ ಎಸ್ಪಿ ಮಹಾಂತೇಶ್ವರ ಜಿಡಿ, ಮುಧೋಳ ಸಿಪಿಆಯ್ ಶಿರಹಟ್ಟಿ, ರಬಕವಿ ಬನಹಟ್ಟಿ ತಾಲೂಕಿನ ಸಿಪಿಆಯ್ ಸಂಜೀವ ಬಳಗಾರ, ಪೋಲಿಸ್ ಸಿಬ್ಬಂದಿ ಹಾಗೂ ಇನ್ನಿತರರಿದ್ದರು. ಮುಧೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.