ಅಂತರರಾಷ್ಟ್ರೀಯ

ನೇಪಾಳದಲ್ಲಿ ಭೂಕುಸಿತ: 9 ಮಂದಿ ಸಾವು, 22 ಮಂದಿ ಕಾಣೆ

ನೇಪಾಳದಲ್ಲಿ ಭೂಕುಸಿತ: 9 ಮಂದಿ ಸಾವು, 22 ಮಂದಿ ಕಾಣೆ

ಕಠ್ಮಂಡು,ಸೆಪ್ಟೆಂಬರ್.13: ನೇಪಾಳದ ಕೇಂದ್ರ ಸಿಂಧುಪಾಲ್ಚೌಕ್ ಜಿಲ್ಲೆಯ ಮೂರು ಸೆಟ್ಲ್ ಮೆಂಟ್ ಗಳಲ್ಲಿ ಭಾನುವಾರ ಬೆಳಗ್ಗಿನ ಜಾವ ಉಂಟಾದ ಎರಡು ಪ್ರತ್ಯೇಕ ಭೂ ಕುಸಿತಗಳಿಂದ ಕನಿಷ್ಠ 9 ಮಂದಿ ಸಾವನ್ನಪ್ಪಿ, 22 ಮಂದಿ ಕಾಣೆಯಾಗಿರುವ ಘಟನೆ ನಡೆದಿದೆ ಎಂದು ಸ್ಥಳೀಯಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂ ಕುಸಿತ ಉಂಟಾದ ಸ್ಥಳದಿಂದ 9 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಂಧುಪಾಲ್ಚೌಕ್ ಜಿಲ್ಲಾ ಆಡಳಿತ ಕಚೇರಿಯ ಮುಖ್ಯ ಜಿಲ್ಲಾ ಅಧಿಕಾರಿ ಉಮೇಶ್ ಕುಮಾರ್ ಧಾಕಲ್ ಅವರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಾತ್ರಿಪೂರ್ತಿ ಭಾರೀ ಮಳೆಯಾಗಿತ್ತು. ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಡಿಎಒ ತಿಳಿಸಿದೆ.

ಬರ್ಹಾಬಿಸ್ ನ ಮೇಲಿನ ಎರಡು ಮತ್ತು ಕೆಳಗಿನ ಒಂದು ಸೆಟ್ಲ್ ಮೆಂಟ್ ನಲ್ಲಿ ಭೂ ಕುಸಿತ ಉಂಟಾಗಿದೆ. ಮತ್ತೊಂದು ಭೂಸಿತ ಸಮೀಪದ ಸೆಟ್ಲ್ ಮೆಂಟ್ ನಲ್ಲಿ ನಡೆದಿದೆ ಎಂದು ಧಾಕಲ್ ತಿಳಿಸಿದ್ದಾರೆ. ಭೂ ಕುಸಿತದಿಂದ 19 ಮನೆಗಳು ಸಂಪೂರ್ಣ ಧರಾಶಾಹಿಯಾಗಿವೆ. ಇನ್ನು ಕೆಲವು ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಡಿಎಒ ತಿಳಿಸಿದೆ.

ಭೂ ಕುಸಿತದಿಂದ ಒಟ್ಟು 222 ಕುಟುಂಬಗಳು ಸಂತ್ರಸ್ತರಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಧಾಕಲ್ ತಿಳಿಸಿದ್ದಾರೆ.

ಸುದ್ದಿ ಓದಿ