ಕಲೆ, ಸಾಹಿತ್ಯ ಪರಂಪರೆಗೆ ರಾಮದುರ್ಗದ ಕೊಡುಗೆ ಅಪಾರ
ಕಸಾಪ ಅಧ್ಯಕ್ಷ ಡಾ. ರಾಜೇಂದ್ರ ಅಣ್ಣಾನವರ ಹೇಳಿಕೆ: ಹುಲಕುಂದ ಗ್ರಾಮದಲ್ಲಿ 8ನೇ ಸಾಹಿತ್ಯ ಸಮ್ಮೇಳನ
ರಾಮದುರ್ಗ 9: ಕಲಿತವರೆಲ್ಲ ಕವಿಗಳಾಗಲಿಲ್ಲ, ಕಲಿಯದವರು ಕವಿಗಳಾಗಿದ್ದಾರೆ. ಸಾಹಿತ್ಯ ದೈವದತ್ತ ಕೊಡುಗೆ. ಅದಕ್ಕೆ ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬಂತೆ ಸಾಹಿತಿಗಳಾಗಿ ಕವಿಗಳಾಗಿ ಹಲವು ಕೃತಿಗಳನ್ನು ರಚಿಸಿ ಕನ್ನಡದ ಕೀರ್ತಿ ಬೆಳಗಿದವರಲ್ಲಿ ತಾಲೂಕಿನ ಮನಿಹಾಳ ಸುರೇಬಾನದ ರಾಮಣ್ಣ ಬ್ಯಾಟಿ ಒಬ್ಬರು ಎಂದು 8 ನೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಅಣ್ಣಾನವರ ನುಡಿದರು.
ತಾಲೂಕಿನ ಹುಲಕುಂದ ಗ್ರಾಮದಲ್ಲಿ ಏರ್ಪಡಿಸಿದ 8 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಜಿಲ್ಲೆಯಲ್ಲಿಯೇ ರಾಮದುರ್ಗ ಐತಿಹಾಸಿಕ, ಸಾಂಸ್ಕೃತಿಕ, ಕಲೆ ಮತ್ತು ಸಾಹಿತ್ಯ ಪರಂಪರೆಗೆ ತನ್ನದೆ ಆದ ಕೊಡುಗೆ ನೀಡಿದೆ ಅದರಲ್ಲಿಯೂ ಹುಲಕುಂದದ ಗೀಗೀ ಪದದ ಭೀಮ ಕವಿ, ಹಾಗೂ ಶಿವಲಿಂಗ ಕವಿಗಳು ಸ್ವಾತಂತ್ಯ ಹೋರಾಟದಲ್ಲಿ ತಮ್ಮ ಹಾಡಿನ ಮೂಲಕ ದೇಶಪ್ರೇಮ ಬೆಳೆಸಿದ ದಿಗ್ಗಜರ ನಾಡಾಗಿದೆ ಎಂದು ಬಣ್ಣಸಿದರು.
ಸರಕಾರ ನಾಡು ನುಡಿಗಾಗಿ ಜಲಕ್ಕಾಗಿ ಶ್ರಮಿಸಿದ ಮಹನಿಯರಿಗೆ ಜೀವನೋಪಾಯಕ್ಕೆ ಮಾಶಾಸನ ನೀಡಬೇಕು ಎಂದು ಒತ್ತಾಯಿಸಿದ ಅವರು ಇದರಿಂದಾ ಕನ್ನಡದ ರಕ್ಷಣೆಗೆ ಬೆಂಬಲ ನೀಡಿದಂತಾಗುತ್ತದೆ ಎಂದು ನುಡಿದರು. ಕನ್ನಡ ಮಾಧ್ಯಮ ಶಾಲೆಗಳು ಇನ್ನೂ ತೆರೆದು ಮೂಲಭೂತ ಸೌಲಭ್ಯಗಳನ್ನು ನೀಡಿ ಎಲ್ಲ ಮಕ್ಕಳೂ ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಿಯೇ ಕಲಿಯುವಂತೆ ಸರಕಾರ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
ಹುಲಕುಂದ ಗ್ರಾಮದ ಕರಿಯಮ್ಮದೇವಿ ಗುಡಿಯಿಂದಾ ಭುವನೇಶ್ವರಿ ದೇವಿ ಭಾವ ಚಿತ್ರದ ಭವ್ಯ ಮೆರವಣಿಗೆಯಲ್ಲಿ ಹಲವಾರು ಕಲಾ ತಂಡಗಳು ಭಾಗಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮೇಶ್ವರ ದೇವಸ್ಥಾನದಲ್ಲಿ ಸಮ್ಮೇಳನಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಾಂಡುರಂಗ ಜಟಗನ್ನವರ ಹಾಗೂ ಪದಾಧಿಕಾರಿಗಳು ಇದ್ದರು.