ಮುರಾರ್ಜಿ ದೇಸಾಯಿ ವಸತಿ ಶಾಲೆಯ 8ವಿದ್ಯಾರ್ಥಿಗಳಿಗೆ ಕೊರೋನಾ ದೃಢ
ಅಧಿಕಾರಿಗಳ ದಿಢೀರ್ ಭೇಟಿ: ಆರೋಗ್ಯ ಸಿಬ್ಬಂದಿಗಳಿಗೆ ಎಚ್ಚರಿಕೆ ವಹಿಸಲು ಸೂಚನೆ
ಮಹಾಲಿಂಗಪುರ 2: ಸ್ಥಳೀಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಏಳು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಕೊರೋನಾ ದೃಢಗೊಂಡಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳಿ ಮತ್ತು ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಕೊರೋನಾ ದೃಢಪಟ್ಟ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಐವರು ವಿದ್ಯಾರ್ಥಿಗಳನ್ನು ವಸತಿ ನಿಲಯದಲ್ಲಿಯೇ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಿ ಆರೋಗ್ಯ ಸಿಬ್ಬಂದಿಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಇದೇ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದಲ್ಲಿ ಸ್ಥಳೀಯ ಕೆಜಿಎಸ್ ಸರ್ಕಾರಿ ಶಾಲಾ ಮಕ್ಕಳೂ ಓದುತ್ತಿದ್ದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಏ.2 ರ ಮಧ್ಯಾಹ್ನ ವಸತಿ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಅಗತ್ಯ ಕ್ರಮದ ಬಗ್ಗೆ ಹೆಚ್ಚಿನ ಗಮನ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯಲ್ಲಿ 6 ರಿಂದ 10 ನೇ ತರಗತಿಯ 115 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಒಟ್ಟು 8ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್-19 ಧೃಡಗೊಂಡಿದ್ದು ಬಿಟ್ಟರೆ ಅವರಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಆತಂಕ ಪಡುವ ಯಾವುದೇ ಗುಣ ಲಕ್ಷಣಗಳಿರುವುದಿಲ್ಲವೆಂದು ಧೈರ್ಯ ತುಂಬಿ ಊಹಾಪೋಹಗಳಿಗೆ ಅವಕಾಶ ನೀಡಬೇಡಿ ಹಾಗೂ ನಿರ್ಲಕ್ಷಿಸಬೇಡಿ ಎಂದು ಮನವಿ ಮಾಡಿದರು.
ಕಳೆದ 4 ತಿಂಗಳುಗಳಿಂದ ಜಮಖಂಡಿ ವಿಭಾಗದಲ್ಲಿ ಹೆಚ್ಚಿನ ಪ್ರಕರಣಗಳೇ ಇರಲಿಲ್ಲ. ಕೋವಿಡ್-19 ಎರಡನೇ ಅಲೆ ಆರಂಭವಾಗಿರುವುದರಿಂದ ಈಗ 10-12 ದಿನಗಳಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಮೊನ್ನೆ ಮುಧೋಳದಲ್ಲಿ 12, ಜಮಖಂಡಿಯಲ್ಲಿ 01, ಈಗ ಮಹಾಲಿಂಗಪುರದಲ್ಲಿ 08ದೃಢಪಟ್ಟಿದ್ದು ಸಾರ್ವಜನಿಕರು ಅನಾವಶ್ಯಕ ಆತಂಕಕ್ಕೊಳಗಾಗದೇ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದರು.
ಉಪತಹಸೀಲ್ದಾರ್ ಎಸ್.ಬಿ.ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಆರೋಗ್ಯ ನಿರೀಕ್ಷಕರಾದ ರಾಜು ಹೂಗಾರ, ಸಿದ್ದರಾಜ ಅರಳಿಮಟ್ಟಿ, ಕಂದಾಯ ನಿರೀಕ್ಷಕ ತಾಳಿಕೋಟಿ, ಗ್ರಾಮಲೆಕ್ಕಾಧಿಕಾರಿ ಸಿ.ಎನ್.ಹೊಸಮನಿ, ಪ್ರಾಂಶುಪಾಲ ಶಿವಾನಂದ ನಂದೆಪ್ಪಗೋಳ ಇತರರು ಇದ್ದರು.
ನಂತರ ಭೇಟಿ ನೀಡಿದ ಜಿಲ್ಲಾ ನೋಡಲ್ ಅಧಿಕಾರಿ ಮಹಾಂತೇಶ ಪಟ್ಟಣಶೆಟ್ಟಿ ಶಾಲಾ ಪರಿಸರದ ವ್ಯವಸ್ಥೆಯನ್ನು ಪರಿಶೀಲಿಸಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಮ್ಮ ಆರೋಗ್ಯ ಸಹಾಯಕರಿಗೆ ತಿಳಿಸಿದರು.
45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕ ಕೋರೋನಾ ಪ್ರತಿಬಂಧಕ ವ್ಯಾಕ್ಷಿನೇಶನ್ ತೆಗೆದುಕೊಳ್ಳಿ, ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಂಡು ಮಾರಕ ಕೋವಿಡ್-19 ರೋಗವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ
ಸಿದ್ದು ಹುಲ್ಲೋಳಿ,
ಉಪವಿಭಾಗಾಧಿಕಾರಿ, ಜಮಖಂಡಿ.
ಫೆ.25 ರಂದು ಮಾಡಿದ ಸಾಮಾನ್ಯ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು. ನಂತರ ಮಾ.26 ರಂದು ಮಾಡಿದ ಆರ್ ಟಿ ಪಿ ಸಿ ಆರ್ ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳಿಗೆ ಕೊರೋನಾ ದೃಢಗೊಂಡಿದ್ದು ಸೂಕ್ತ ಆದೇಶಕ್ಕೆ ಕಾಯುತ್ತಿದ್ದೇವೆ
ಎಂ.ಬಿ.ಗೋಣಿ,
ಕಿರಿಯ ಆರೋಗ್ಯ ಸಹಾಯಕ.