ಮಹಲಿಂಗಪುರ

ಕನಕದಾಸ ಪತ್ತಿನ ಸಹಕಾರಿ ಸಂಘಕ್ಕೆ 32 ಲಕ್ಷ ನಿವ್ವಳ ಲಾಭ : ಮಹಾಲಿಂಗಪ್ಪ ಜಕ್ಕನ್ನವರ

ಕನಕದಾಸ ಪತ್ತಿನ ಸಹಕಾರಿ ಸಂಘಕ್ಕೆ 32 ಲಕ್ಷ ನಿವ್ವಳ ಲಾಭ : ಮಹಾಲಿಂಗಪ್ಪ ಜಕ್ಕನ್ನವರ

ಮಹಾಲಿಂಗಪುರ 26: ಕನಕದಾಸ ಪತ್ತಿನ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 32.73 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕನ್ನವರ ಹೇಳಿದರು. 

ಸ್ಥಳೀಯ ಸಂಗೋಳ್ಳಿ ರಾಯಣ್ಣ ಉದ್ಯಾನವನದಲ್ಲಿ ಜರುಗಿದ 21 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂಘವನ್ನು ಒಟ್ಟು 1929 ಸದಸ್ಯರನ್ನು ಹೊಂದಿದೆ. ಒಟ್ಟು 115.36 ಲಕ್ಷ ರೂ ಶೇರು ಬಂಡವಾಳ ಹೊಂದಿದೆ. 1367.26 ಲಕ್ಷ ರೂ ಠೇವು ಬಂಡವಾಳ ಇರುತ್ತದೆ. ಬ್ಯಾಂಕಿನಿಂದ ಒಟ್ಟು 12.69 ಕೋಟಿ ಸಾಲವನ್ನು ವಿತರಿಸಲಾಗಿದೆ. ಸಂಘದ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಹಕರು ಹೆಚ್ಚಾಗಿ ಠೇವಣಿ ಮತ್ತು ಸಕಾಲಕ್ಕೆ ಸಾಲದ ಮರುಪಾವತಿಯ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು. ಕಳೆದ 20 ವರ್ಷಗಳಿಂದ ಪಾರದರ್ಶಕ ಮತ್ತು ನಿಶ್ವಾರ್ಥ ಸೇವೆಯಿಂದ ಸಂಘವು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದರು. 

ಸಂಘದ ಆಡಳಿತ ಮಂಡಳಿ ಸದಸ್ಯ ಮಹಾಲಿಂಗಪ್ಪ ಸನದಿ ಮಾತನಾಡಿ ಸಹಕಾರಿ ಸಂಘಗಳು ಅವಶ್ಯಕತೆ ಇದ್ದವರಿಗೆ ಸಾಲವನ್ನು ವಿತರಿಸುವ ಮೂಲಕ ಗ್ರಾಹಕರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತಿವೆ. ಗ್ರಾಹಕರ ಸಹಕಾರ, ಆಡಳಿತ ಮಂಡಳಿಯ ಪರಸ್ಪರ ಸಹಕಾರ ಮನೋಭಾವನೆ ಹಾಗೂ ಸಿಬ್ಬಂದಿಯ ಪಾರದರ್ಶಕ ವ್ಯವಹಾರದಿಂದಾಗಿ ಸಂಘವು ಇಂದು 16 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ ವರ್ಷ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಜೊತೆಗೆ ಬಿಡಿಸಿಸಿ ಬ್ಯಾಂಕಿನಿಂದ ಉತ್ತಮ ಕೃಷಿಯೇತರ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಸಂತೋಷದ ಸಂಗತಿಯಾಗಿದೆ ಎಂದರು. 

ಆಡಳಿತ ಮಂಡಳಿ ಇನ್ನೋರ್ವ ಸದಸ್ಯ ಮಲ್ಲಪ್ಪ ಸಿಂಗಾಡಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷನೀಕ ಧನಸಹಾಯ ನೀಡಿ ಗೌರವಿಸಲಾಯಿತು. ಅಗ್ನಿಪಥ ಯೋಜನೆಯಲ್ಲಿ ಸೈನಿಕರಾಗಿ ಆಯ್ಕೆಯಾದ ಕೆಸರಗೊಪ್ಪ ಗ್ರಾಮದ ಭೀಮಶಿ ವಿಠ್ಠಲ ಶಿರಗುಪ್ಪಿ, ಅಕ್ಕಿಮರಡಿಯ ಮಂಜುನಾಥ ಕಂಬಳಿ ಅವರನ್ನು ಸನ್ಮಾನಿಸಲಾಯಿತು.  

ಸಂಘದ ಸಿಬ್ಬಂದಿ ಚಂದ್ರು ಸಂಶಿ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಶ್ರೀಶೈಲ ಕಳ್ಯಾಗೋಳ, ಸಂಘದ ನಿರ್ದೇಶಕ ಭೀಮಪ್ಪ ಸಂಶಿ, ಭೀಮಪ್ಪ ತಿಮ್ಮಾಪೂರ, ಮಲ್ಲಪ್ಪ ಮಳಲಿ, ವಿಠ್ಠಲ ಬನಾಜ, ಗಣಪತಿ ಮಡ್ಡೆನ್ನವರ, ಮೌನೇಶ ಬಡಿಗೇರ, ರೇಣುಕಾ ಬಾ. ಹಾದಿಮನಿ, ಸುರೇಖಾ ಮ. ಲೋಕುರಿ, ಜಯಶ್ರೀ ಪ್ರ. ಸನ್ನಟ್ಟಿ, ಹಿರಿಯರಾದ ಗೌಡಪ್ಪಗೌಡ ಪಾಟೀಲ, ಸದಾಶಿವ ಕಂಬಳಿ, ಸಿದ್ರಾಮ ಯರಗಟ್ಟಿ, ಸಿಬ್ಬಂದಿಯಾದ ಮಹಾಲಿಂಗ ಹುಬ್ಬಳ್ಳಿ, ಶಂಕರ ಮೇಟಿ, ಮಲ್ಲಿಕಾರ್ಜುನ ಮೇಟಿ, ಆನಂದ ಪೂಜೇರಿ, ಶ್ರೀಶೈಲ ಅವಟಿ, ದಾನೇಶ ಹೂಗಾರ, ಮಹಾಲಿಂಗ ಮಾಳಿ, ನಿಶಾಂತ ಬಂಡಿ ಸೇರಿದಂತೆ ಗ್ರಾಹಕರು, ಶೇರುದಾರರು ಇದ್ದರು. 

ಸಂಘದ ಮುಖ್ಯಕಾರ್ಯನಿರ್ವಾಹಕ ಪ್ರಭು ಹುಬ್ಬಳ್ಳಿ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿ-ವಂದಿಸಿದರು. 


ಸುದ್ದಿ ಓದಿ