ದೆಹಲಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ 23 ವರ್ಷದ ಅಭ್ಯರ್ಥಿ ಸಾವು
ನವದೆಹಲಿ, ಸೆ. 21: ದೆಹಲಿ ಪೊಲೀಸ್ ನೇಮಕಾತಿಯ ಅಂಗವಾಗಿ ವಜೀರಾಬಾದ್‌ನಲ್ಲಿರುವ ದೆಹಲಿ ಪೊಲೀಸ್ ಅಕಾಡೆಮಿಯಲ್ಲಿ ಸೋಮವಾರ ನಡೆದ ದೈಹಿಕ ಸಹಿಷ್ಣುತೆ ಮತ್ತು ಅಳತೆ ಪರೀಕ್ಷೆ (PEMT) ವೇಳೆ ಓಟದಲ್ಲಿ ಭಾಗವಹಿಸಿದ್ದ 23 ವರ್ಷದ ಯುವಕನೊಬ್ಬ ಕುಸಿದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಅನುಪ್‌ಶಹರ್ ನಿವಾಸಿ ಸೌರಭ್ ಕುಮಾರ್ ಎಂದು ಗುರುತಿಸಲಾಗಿದೆ. ನಡೆಯುತ್ತಿದ್ದ ದೈಹಿಕ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿ ಭಾಗವಹಿಸಿದ್ದ ಅವರು ಓಟದ ವೇಳೆ ಏಕಾಏಕಿ ಟ್ರ್ಯಾಕ್‌ನಲ್ಲಿ ಕುಸಿದುಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 11.11ಕ್ಕೆ ಪೊಲೀಸರಿಗೆ ಘಟನೆ ಕುರಿತು ಮಾಹಿತಿ ಲಭಿಸಿತು. ಅಕಾಡೆಮಿಯಿಂದ ಪೊಲೀಸ್ ಕಂಟ್ರೋಲ್ ರೂಂ (PCR) ವಾಹನದಲ್ಲಿ ಕುಮಾರ್ ಅವರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಾ ಸ್ಥಳದಲ್ಲೇ ಅವರಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲಾಗಿತ್ತು.
ಆದರೆ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತಂದಾಗ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದರು ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ GTB ಆಸ್ಪತ್ರೆಗೆ ಕಳುಹಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಸಹಕಾರಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 194 ಅಡಿಯಲ್ಲಿ ಸೊನಿಯಾ ವಿಹಾರ್ ಪೊಲೀಸ್ ಠಾಣೆಯಲ್ಲಿ ಇನ್‌ಕ್ವೆಸ್ಟ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.