ಧಾರವಾಡ - ಹುಬ್ಬಳ್ಳಿ

ಸಿರಸಂಗಿ ಲಿಂಗಾರಾಜರ ೧೨೦ನೇ ಪುಣ್ಯಸ್ಮರಣೆ

ಸಿರಸಂಗಿ ಲಿಂಗಾರಾಜರ ೧೨೦ನೇ ಪುಣ್ಯಸ್ಮರಣೆ
ಹುಬ್ಬಳ್ಳಿ ೨೪ : ಹೊರಕೇರಿ ಮಾಸ್ತರ್ ಶಿಕ್ಷಣ ಪ್ರತಿಷ್ಠಾನ, ರಾಣಿ ಚೆನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ವಿವಿಧ ಲಿಂಗಾಯತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ ೧೨೦ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. 
ಭಾರತ ನಗರದಲ್ಲಿರುವ ಲಿಂಗರಾಜ ವಿವಿದೋದ್ದೇಶ ಸಂಸ್ಥೆಯ ಆವರಣದಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರೂ, ತಮ್ಮ ಸಂಪೂರ್ಣ ಸಂಸ್ಥಾನವನ್ನು ಲೋಕಕಲ್ಯಾಣಕ್ಕಾಗಿ ಅರ್ಪಿಸಿದ ಸಿರಸಂಗಿ ಲಿಂಗರಾಜ ದೇಸಾಯಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಸಂಸ್ಥಾನ ಪೀಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಮಾಜದ ಹಿಂದುಳಿದ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂಬ ಮಹಾದಾಸೆಯಿಂದ ಸಿರಸಂಗಿ ಲಿಂಗರಾಜರು ಶಿಕ್ಷಣ ಸಂಸ್ಥೆಗಳಿಗೆ ಮಹಾದಾನ ನೀಡಿದರು. ಅವರ ಸೇವೆ ಹಾಗೂ ತ್ಯಾಗವನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಆದರ್ಶವಾಗಿ ಬದುಕಬೇಕು ಎಂದು ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಸೊಹನ್ ಸುರೇಶ್ ಹೊರಕೇರಿ, ನಿವೃತ್ತ ಗ್ರಂಥಪಾಲಕ ಸಿದ್ದಯ್ಯ ಹಿರೇಮಠ, ರವೀಂದ್ರ ಕುಡವಕ್ಕಲಿಗ, ಶೇಖರ್ ಹುಬ್ಬಳ್ಳಿ, ಯಲ್ಲಪ್ಪ ಹುಲಗೂರ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ