ಅವಧಿಗೂ ಮುನ್ನವೇ ಶೇ.100 ಸಾಧನೆ: ಬಬಲೇಶ್ವರ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ
ಲೋಕದರ್ಶನ ವರದಿ
ಅವಧಿಗೂ ಮುನ್ನವೇ ಶೇ.100 ಸಾಧನೆ: ಬಬಲೇಶ್ವರ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ
ವಿಜಯಪುರ 16: 2026ರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದಲ್ಲಿ ನಿಗದಿತ ಅವಧಿಗೂ ಮುನ್ನವೇ ಶೇ.100ರಷ್ಟು ಗುರಿ ಸಾಧಿಸಿದ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರನ್ನು ಗುರುವಾರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ಗಣತಿ ನಮೂನೆಗಳ ವಿತರಣೆ ಹಾಗೂ ಡಿಜಿಟೈಸೇಷನ್ ಕಾರ್ಯವನ್ನು ನಿಗದಿತ ಸಮಯಕ್ಕಿಂತ ಮುಂಚೆಯೇ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಗೌರವಿಸಲಾಯಿತು. 29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಭಾಗ ಸಂಖ್ಯೆ 84ರ ಮತಗಟ್ಟೆ ಮಟ್ಟದ ಅಧಿಕಾರಿ ಎಚ್.ಎನ್. ಮೋಹಿತೆ ಹಾಗೂ ಮೇಲ್ವಿಚಾರಕಿ ಸುಜಾತಾ ಬಾಗಲಕೋಟೆ, ಭಾಗ ಸಂಖ್ಯೆ 204ರ ಮತಗಟ್ಟೆ ಮಟ್ಟದ ಅಧಿಕಾರಿ ಚಂದ್ರವ್ವ ತಂಬದ ಹಾಗೂ ಮೇಲ್ವಿಚಾರಕಿ ಶಕೆ.ಕೆ. ಅಸ್ಕಿ, ಭಾಗ ಸಂಖ್ಯೆ 212ರ ಮತಗಟ್ಟೆ ಮಟ್ಟದ ಅಧಿಕಾರಿ ಸುನೀತಾ ವಾಲೀಕಾರ ಹಾಗೂ ಮೇಲ್ವಿಚಾರಕ ಶಿವಪ್ಪ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು. ಅವಧಿಗೂ ಮುನ್ನವೇ ಅತ್ಯುತ್ತಮ ಪ್ರಗತಿ ಸಾಧಿಸಿದ ಅಧಿಕಾರಿಗಳ ಕಾರ್ಯವೈಖರಿಯನ್ನು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಬಲೇಶ್ವರ ತಹಶೀಲ್ದಾರ್ ಶಾಂತಲಾ ಚಂದನ್ ಹಾಗೂ ತಿಕೋಟಾ ತಹಶೀಲ್ದಾರ್ ಸುರೇಶ್ ಚವಲಗರ್ ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.