ಚಿಂತೆ ಯಾಕೆ ಮಾಡುತೀಯೊ ಗೆಳೆಯ...?
-ವೆಂಕಟೇಶ ಚಾಗಿ
ಲಿಂಗಸುಗೂರ
ಅಂದು ಯಾವದೋ ಕೆಲಸಕ್ಕಾಗಿ, ಬೈಕ್ ಕೈ ಕೊಟ್ಟಿದ್ದರಿಂದ ರಸ್ತೆಯಲ್ಲಿ ಪಾದಯಾತ್ರೆ ಮಾಡುತ್ತಾ ಹೋಗುತ್ತಿದ್ದೆ. ತುಂಬಾ ದಿನಗಳಿಂದ ನನ್ನನ್ನು ನೋಡದೇ ಇರುವ ನನ್ನ ಪರಿಚಿತ ಆಸಾಮಿ " ಸಾರ್ ಹೇಗಿದಿರಾ ,ಎಷ್ಟು ದಿನ ಆಯ್ತು ನಿಮ್ಮನ್ನ ನೋಡಿ" ಅಂದ. ಅದಕ್ಕೆ ನಾನು ಚೆನ್ನಾಗಿದಿನಪ್ಪಾ ನೀ ಹೇಗಿದಿಯಾ? "ಅಂದೆ. ಅದಕ್ಕವನು ಸುಮ್ನಿರಿ ಸಾರ್ ಚಿಂತೆ ಮಾಡಿ ಮಾಡಿ ಎಷ್ಟು ಸೊರಗಿ ಹೋಗಿದಿರಾ? ಮೊದಲಿನಂಗೆ ಇಲ್ಲ. ನೀವು." ಎಂದ. ನನಗಾವ ಚಿಂತೆ? ನಾನು ಅಷ್ಟೋಂದು ಸೊರಗಿದಿನಾ ? ಹೀಗೆ ಒಂದು ಹೊಸ ಚಿಂತೆನೇ ಶುರುವಾಗೋಯ್ತು.
ಚಿಂತೆ ಇಲ್ದೆ ಇರೋಕೆ ನಮ್ಮಿಂದಾಗೋದಿಲ್ವೆ? ಆಗಲ್ಲ ಅನಿಸುತ್ತರ. ಪ್ರತಿಯೊಬ್ಬರಿಗೂ ಒಂದಿಲ್ಲಾ ಒಂದು ಚಿಂತೆ ಇದ್ದೆ ಇರುತ್ತೆ. ಕೆಲಸ ಇಲ್ಲದವರಿಗೆ ಕೆಲಸ ಇಲ್ಲವಲ್ಲ ಎಂಬ ಚಿಂತೆ. ಕೆಲಸ ಇರುವವರಿಗೆ ಕೆಲಸ ಮಾಡಬೇಕಲ್ಲ ಅನ್ನುವ ಚಿಂತೆ. ಹೀಗೆ ಹುಟ್ಟಿನಿಂದ ಸಾಯೋವರೆಗೂ ಹಲವಾರು ಬಗೆಯ ಚಿಂತೆಗಳಲ್ಲೆ ನಾವು ಬದುಕುತ್ತೇವೆ. ಒಂದೇ ವಿಷಯಕ್ಕೆ ಸಂಬಂಧಿಸಿದ ಚಿಂತೆ ತಲೆ ಕೊರೆಯಲು ಪ್ರಾರಂಭಿಸಿದರೆ ಆಹಾರ, ನಿದ್ರೆಯ ಪರಿಜ್ಞಾನ ಇರುವುದೇ ಇಲ್ಲ. ಅಯ್ಯೋ ನನಗೆ ಹೀಗಾಗಿಬಿಡ್ತಲ್ಲ ಅಂತ ಕೊರಗಿಸುವ ಚಿಂತೆ ,ಅಯ್ಯೋ ನನಗೆ ಅದು ಸಿಗಲಿಲ್ಲವಲ್ಲ ಅಂತಲೂ ಕೊರಗುತ್ತಾ ಚಿಂತಿಸುವ ಜನರಿದ್ದಾರೆ.
ಹುಟ್ಟಿನಿಂದ ಸಾಯೋವರೆಗೂ ಚಿಂತೆ ಮಾಡದ ಜನರು ಭೂಮಿ ಮೇಲೆ ಇಲ್ಲ ಎಂದರೆ ತಪ್ಪಾಗಲಾರದು. ಚಿತೆ-ಸತ್ತಾಗ ಮನುಷ್ಯನ ದೇಹವನ್ನು ಸುಟ್ಟರೆ, ಚಿಂತೆ-ಮನುಷ್ಯ ಜೀವಂತ ಇರುವಾಗಲೇ ಸುಡುತ್ತದೆ.
ಚಿಂತೆ ಇಲ್ಲದ ಮನುಷ್ಯ ಇಲ್ಲ ಎಂದಮೇಲೆ ಚಿಂತೆ ಮಾಡದೇ ಇರಲು ಸಾಧ್ಯವೆ? ಇಲ್ಲ. ಚಿಂತೆ ಮಾಡಿಸುವ ವಿಷಯವನ್ನು ಚಿಂತನೆಗೆ ಪರಿವತರ್ಿಸಿ ಆ ವಿಷಯಕ್ಕೆ ಒಂದು ಸೂಕ್ತವಾದ ಯೋಗ್ಯ ಆರೋಗ್ಯಕರ ನಿಧರ್ಾರವನ್ನು ತೆಗೆದುಕೊಂಡಲ್ಲಿ ಚಿಂತೆ ಅಲ್ಲಿಗೇ ಕೊನೆಗೊಳ್ಳುತ್ತದೆ ಅಲ್ಲವೆ.
ಜೀವನ ಅಮೂಲ್ಯವಾದುದು. ಈ ಜೀವನವನ್ನು ಕಳೆದುಕೊಂಡರೆ ಮತ್ತೆ ಪಡೆಯುವ ಮಾತೇ ಇಲ್ಲ. ಜಗತ್ತಿನಲ್ಲಿ ಅಸಂಖ್ಯಾತ ಜನ ಹುಟ್ಟು ಸಾವು ಕಂಡಿದ್ದಾರೆ. ಆದರೆ ಮರುಹುಟ್ಟು ಕಂಡವರು ಯಾರೂ ಇಲ್ಲ. ಅಂದಮೇಲೆ ಹೀಗಿರುವ ಬದುಕನ್ನು ಸುಂದರವಾಗಿಸುವುದು ಯೋಗ್ಯವಲ್ಲವೆ? ಚಿಂತೆ ಎಂಬ ಚಿತೆಯಲ್ಲಿ ಬೆಂದು ಬದುವುದಕ್ಕಿಂತ ಸಮಸ್ಯೆಗಳನ್ನು ಚಿಂತನೆಗೆ ಒಳಪಡಿಸಿ ಯೋಗ್ಯ ಪರಿಹಾರವನ್ನು ಹುಡುಕಿ ಜೀವಿಸುವುದು ಉತ್ತಮ.
ಹಾಗಾದರೆ ಚಿಂತೆಗಳಿಗೆ ಈಗಲೆ ಒಂದು ಗುಡ್ ಬೈ ಹೇಳಿಬಿಡಿ. ಖುಷಿಯಿಂದ ಬದುಕಲು ಕಲಿಯಿರಿ.