ಹಳ್ಳಿ ಹಬ್ಬ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ; ಶಿಕ್ಷಕ ಸಿದ್ಧಲಿಂಗ ಚೌಧರಿ ಉದ್ಘಾಟನೆ
ಸಿಂದಗಿ 31: ಪಟ್ಟಣದ ವಿಜಯಪುರ ರಸ್ತೆಯ ಚಿಕ್ಕಸಿಂದಗಿ ಬಳಿ ಇರುವ ಶಿವಕಾಶಿ ಮಹಿಳಾ ಸಂಘದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಹಳ್ಳಿ ಹಬ್ಬ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶಿಕ್ಷಕ ಸಿದ್ಧಲಿಂಗ ಚೌಧರಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಮಕ್ಕಳ ಬೆಳವಣಿಗೆಯಲ್ಲಿ ಶಾಲಾ ಶಿಕ್ಷಕರ ಪಾತ್ರ ಎಷ್ಟು ಮುಖ್ಯಯೋ ಪಾಲಕರ ಪಾತ್ರವು ಅಷ್ಟೆ ಮುಖ್ಯವಾಗಿದೆ. ಪಾಲಕರು ಮಕ್ಕಳ ಅಧ್ಯಯನದೆಡೆಗೆ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಹೇಳಿದರು.
ಸಿಂದಗಿ ಪಟ್ಟಣದ ವಿಜಯಪುರ ರಸ್ತೆಯ ಚಿಕ್ಕಸಿಂದಗಿ ಬಳಿ ಇರುವ ಶಿವಕಾಶಿ ಮಹಿಳಾ ಸಂಘದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಹಳ್ಳಿ ಹಬ್ಬ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಮೊಬೈಲ್ ಗಿಳಿಯಿಂದ ಆಚೆ ಬಂದು ಜ್ಞಾನಾರ್ಜನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಪ್ರದಾಯ, ಆಚರಣೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಇಂತಹ ಕಾರ್ಯಕ್ರಮ ಪೂರಕವಾಗಿವೆ. ಸುಷ್ಮಾ ಶಾಲೆಯ ಆವರಣದಲ್ಲಿ ದೇಸೀ ಸೊಗಡನ್ನು ಪರಿಚಯಿಸುವ ಹಳ್ಳಿ ಹಬ್ಬ ಒಂದು ವಿಶಿಷ್ಟ ಕಾರ್ಯಕ್ರಮ ಎಂದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಶಿಕ್ಷಕ ಸಿದ್ಧಲಿಂಗ ಚೌಧರಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ, ನಾವೀನ್ಯತೆ ಮತ್ತು ಸ್ಥಳೀಯ ಸಂಪ್ರದಾಯಗಳ ಅರಿವನ್ನು ಬೆಳೆಸುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಪೋಷಕರ ಮತ್ತು ಶಾಲೆಗಳ ಆದ್ಯ ಕರ್ತವ್ಯ. ಜ್ಞಾನ ಮತ್ತು ತಂತ್ರಜ್ಞಾನದೆಡೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಲ್ಲಿ ಶಾಲೆಯು ಉತ್ತಮ ವಾತಾವರಣ ಪ್ರದರ್ಶಿಸುತ್ತಿದೆ ಎಂದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸುಧಾಕರ ಚವ್ಹಾಣ ಮಾತನಾಡಿ, ಇದು ಪಠ್ಯ ಕ್ರಮದ ಒಂದು ಭಾಗವೇ ಆಗಿದ್ದು, ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆ. ಇಂದಿನ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಬೆಳೆಸುವುದು ಅತ್ಯಗತ್ಯವಾಗಿದೆ. ಆ ದಿಸೆಯಲ್ಲಿ ಸುಷ್ಮಾ ಶಾಲೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ನಾಗೇಶ ತಳವಾರ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಶೇಖ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಮುಖ್ಯಸ್ಥ ಶರಣಗೌಡ ಬಿರಾದಾರ ಮಾತನಾಡಿದರು.
ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸೋಲಾರ ಸಿಸ್ಟಮ್, ಪವನ ಶಕ್ತಿ, ಮಾನವನ ರಕ್ತ ಪರಿಚಲನಾ ವ್ಯವಸ್ಥೆ, ಮಾನವನ ಜೀರ್ಣಾಂಗ ವ್ಯವಸ್ಥೆ, ನಿಸರ್ಜನಾಂಗ ವ್ಯವಸ್ಥೆ, ಕೃಷಿ ಪದ್ದತಿ, ದ್ವೀತಿ ಸಂಶ್ಲೇಷಣಾ ಕ್ರಿಯೆ, ಎಲೆಕ್ಟ್ರಾನಿಕ್ ವಿನ್ಯಾಸ, ವಿವಿಧ ಕೃಷಿ ಪದ್ದತಿಗಳು, ಉಪ್ಪು ತಯಾರಿಕೆ, ಸೋಲಾರ್ ವಿದ್ಯುತ್ ಬಳಕೆ ಸೇರಿದಂತೆ ನಾನಾ ಬಗೆಯ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು. ಹಳ್ಳಿ ಹಬ್ಬಕ್ಕೆ ಸಂಬಂಧಿಸಿದ ಗ್ರಾಮೀಣ ಸೊಗಡಿನ ಚಿತ್ರಣಗಳು ಜನಮನ ಸೆಳೆದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಮಲ್ಲಿಕಾರ್ಜುನ ಬಿರಾದಾರ, ಕಾವ್ಯ ಬಿರಾದಾರ, ಮುಖ್ಯಗುರುಮಾತೆ ವಿಜಯಲಕ್ಷ್ಮಿ ಬಿರಾದಾರ, ಮಲ್ಲಮ್ಮ ಕುಂಬಾರ, ಪೂಜಾ ಕರ್ನಾಳ, ಭಾರತಿ ಅಗಸರ, ಜಯಶ್ರೀ ಚಲವಾದಿ, ವೈಷ್ಣವಿ ಗುತ್ತೇದಾರ, ರಿಜ್ವಾನ ತಾಂಬೋಳಿ, ಸಿದ್ದಮ್ಮ ಹರವಾಳ, ರಾಘವೇಂದ್ರ ನಾಯಕ, ಸಂಗಮೇಶ ಕರಡಿ, ಪವನ ಕುಲಕರ್ಣಿ, ಕುಮಾರ ಗುಡಿಮನಿ, ಸುಧೀರ ಕೆಂಭಾವಿ, ಪಿ.ಎಸ್.ಸಾಸನೂರ, ಶಾಂತು ಬಿರಾದಾರ, ಕಲ್ಯಾಣಿ ಧೂಪ, ರವಿ, ಗೋಕುಲ ನಾಯಕ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.