ಸವದತ್ತಿ ಪೊಲೀಸರ ಕಾರ್ಯಾಚರಣೆ : ಯಲ್ಲಮ್ಮನಗುಡ್ಡದಲ್ಲಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳಿಯ ಬಂಧನ, 40 ಗ್ರಾಂ ಚಿನ್ನಾಭರಣ ವಶಕ್ಕೆ

ಸವದತ್ತಿ ಪೊಲೀಸರ ಕಾರ್ಯಾಚರಣೆ : ಯಲ್ಲಮ್ಮನಗುಡ್ಡದಲ್ಲಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳಿಯ ಬಂಧನ, 40 ಗ್ರಾಂ ಚಿನ್ನಾಭರಣ ವಶಕ್ಕೆ

ಬೆಳಗಾವಿ, ಅ, 5 : ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡ ಶ್ರೀ ರೇಣುಕಾ ದೇವಸ್ಥಾನದ ಮಹಾನವಮಿಯ ಜಾತ್ರೆ ವೇಳೆ ಶ್ರೀ ರೇಣುಕಾದೇವಿ ದೇವಸ್ಥಾನದ ಆವರಣದಲ್ಲಿ ಆಭರಣ ಕಳವು ಮಾಡುತ್ತಿದ್ದ ಕಳ್ಳಿಯನ್ನು ಬಂಧಿಸಿರುವ ಸವದತ್ತಿ ಪೊಲೀಸರು ಬಂಧಿತಳಿಂದ 40 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

   ದಿ. 30ರಂದು ಶ್ರೀಮತಿ ಅನ್ನಪೂರ್ಣ ಮಹಾಂತಪ್ಪ ಸಂದಿಗವಾಡ (ಸಾ.ಧಾರವಾಡ) ಇವರು ಯಲ್ಲಮ್ಮನಗುಡ್ಡದಲ್ಲಿ ಶ್ರೀ ರೇಣುಕಾ ದೇವಿಯ ದರ್ಶನ ಮಾಡಲು ಸರತಿ ಸಾಲಿನಲ್ಲಿ ಹೋಗುತ್ತಿದ್ದಾಗ ಕಳ್ಳರು ಅವರ ಕೊರಳಲ್ಲಿದ್ದ 40 ಗ್ರಾಂ ತೂಕದ ಮಂಗಳಸೂತ್ರವನ್ನು ಕಳ್ಳತನ ಮಾಡಿ ಫರಾರಿಯಾಗಿದ್ದರು.  ಚಿನ್ನಾಭರಣ ಕಳೆದುಕೊಂಡ ಮಹಿಳೆಯು ಕಳ್ಳತನ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಈ ಪ್ರಕರಣದಲ್ಲಿ ಹೆಚ್ವುವರಿ  ಮಹಾನಿಂಗ ನಂದಗಾಂವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಹಾಗೂ ರಾಮನಗೌಡ ಹಟ್ಟಿ, ಡಿ.ಎಸ್.ಪಿ, ರಾಮದುರ್ಗ ಉಪ ವಿಭಾಗ ಮಾರ್ಗದರ್ಶನದಲ್ಲಿ ಕರುಣೀಶಗೌಡ, ಜೆ. ಪಿ.ಐ ಸವದತ್ತಿ ಇವರ ನೇತೃತ್ವದಲ್ಲಿ ಮಲಕನಗೌಡ.ಬಿ.ಬಿರಾದರ ಪ್ರೋ. ಪಿಎಸ್.ಐ ಅವರನ್ನೊಳಗೊಂಡ ಸವದತ್ತಿ ಠಾಣೆಯ ಸಿಬ್ಬಂದಿ ಜನರು ಯಶಸ್ವಿ ಕಾರ್ಯಾಚರಣೆ ನಡೆಸಿ ದಿ. 4ರಂದು ಆರೋಪಿತಳನ್ನು ಬಂಧಿಸಿ ಅವಳಿಂದ ಕಳವು 40 ಗ್ರಾಂ ತೂಕದ ಅಂದಾಜು 2,00,000 ರೂ ಬೆಲೆಬಾಳುವ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿ ಕೊಂಡಿರುತ್ತಾರೆ. 

     ಬಂಧಿತಳು ಜಾತ್ರೆ ಹಾಗೂ ಜನದಟ್ಟನೆ ಸ್ಥಳಗಳಲ್ಲಿ ಸಾರ್ವಜನಿಕರ ಕೊರಳಲ್ಲಿರುವ ಮತ್ತು ಬ್ಯಾಗಗಳಲ್ಲದ್ದ ಆಭರಣ ಮತ್ತು ಹಣವನ್ನು ಕಳವು ಮಾಡುವ ಹಿನ್ನಲೆಯನ್ನು ಹೊಂದಿದ್ದಾಳೆ ಎನ್ನಲಾಗಿದೆ. ಬಂಧಿತಳು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಮೂಲದವಳಾಗಿದ್ದು ಸದರಿಯವಳ ಮೇಲೆ ಸೊಲ್ಲಾಪುರ ರೇಲ್ವೆ ಪೊಲೀಸ್ ಠಾಣೆಯಲ್ಲಿ 02, ಧಾರವಾಡ ರೇಲ್ವೆ ಪೊಲೀಸ್ ಠಾಣೆಯಲ್ಲಿ 02, ಕಲ್ಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ 02, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವಳಿದ್ದು ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣದಲ್ಲಿ ಆರೋಪಿತಳು ಆಗಿರುತ್ತಾಳೆ.

     ಈ ಕಾರ್ಯಾಚರಣೆಯಲ್ಲಿ ಠಾಣೆಯ ಸಿಬ್ಬಂದಿಗಳಾದ ಎಮ್.ಎಮ್.ಸಂಗೊಳ್ಳಿ ಎ.ಎಸ್.ಐ, ಎಚ್.ಬಿ.ವಾಸನ್,  ಎಮ್.ಪಿ.ತೇರದಾಳ, ಎ.ಎಸ್.ಕಪ್ಪತ್ತಿ, ಪಿ.ಎಫ್.ಗೋವನಕೊಪ್ಪ, ಎಮ್.ಸಿ.ಮನ್ನಿಕೇರಿ, ಜಿ.ಎಸ್. ಪಾಟೋಳ್ಯ, ಎಮ್.ಟಿ ನಡುವಿನಮನೆ, ಎ.ಸಿ.ಕಾಪಸಿ ಮತ್ತು ಮಹಿಳಾಸಿಬ್ಬಂದಿ ಶ್ರೀಮತಿ ಎನ್.ಆರ್.ಅಬ್ದಾರ, ಶ್ರೀಮತಿ ಎಸ್.ವಿ.ಹೊಸೂರ, ಎಸ್.ಎಸ್.ಹಂಪನ್ನವರ ಪಾಲ್ಗೊಂಡಿದ್ದರು. ಸರಗಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳಿಯನ್ನು ಬಂಧಿಸಿರುವ ಸವದತ್ತಿ ಪೊಲೀಸ್‌ರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ಸುದ್ದಿ ಓದಿ