ಸರದಾರ್, ವಲ್ಲಭಬಾಯಿ ಪಟೇಲ್..!
- ಪ್ರವೀಣ ಗಿರಿ
ಆ ಕೆಚ್ಚೆದೆಯ ಉಕ್ಕಿನ ಮನುಷ್ಯ(ಮ್ಯಾನ್ ಆಫ್ ಸ್ಟೀಲ್)ನನ್ನು ನೆನೆಪಿಸಿಕೊಳ್ಳದಿದ್ದರೇ ಅಥವಾ ಅವರ ಬಗ್ಗೆ ಓದದಿದ್ದರೇ ಬಹುಷಃ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕಥೆ ಅಪೂರ್ಣವೆನಿಸುತ್ತದೆ.
ಅಂತಹ ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದ ವ್ಯಕ್ತಿಯ ಅತೀ ಎತ್ತರವಾದ ಪುತ್ಥಳಿಯನ್ನು ಪ್ರತಿಷ್ಠಾಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ಹಲವು ವರ್ಷಗಳ ಹಿಂದೆ ತನ್ನ ಕನಸನ್ನು ದೇಶದ ಜನರ ಮುಂದೆ ಬಿಚ್ಚಿಟ್ಟಾಗ ಮುಸಿ-ಮುಸಿ ನಕ್ಕವರೇ ಹಲವರು.
ಆದರೆ ಅದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಳ್ಳಲಿಲ್ಲ. ಕಂಡ ಕನಸನ್ನು ನನಸಾಗಿಸದೇ ಬಿಡಲೂ ಇಲ್ಲ. ಪರಿಣಾಮ ಇಂದು ಇಡೀ ಜಗತ್ತು ನಿಬ್ಬೆರಗಾಗಿ ಭಾರತ ದೇಶದತ್ತ ನೋಡುವಂತಾಗಿದೆ. ಸಣ್ಣ-ಪುಟ್ಟ ಸಂಸ್ಥಾನಗಳಾಗಿ ಎಲ್ಲೆಂದರಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮ ದೇಶವನ್ನು ಒಗ್ಗೂಡಿಸಿದ 'ಸರದಾರ'ನೊಬ್ಬನ ಪುತ್ಥಳಿ ಮುಗಿಲೆತ್ತರಕ್ಕೆ ಮುಖ ಮಾಡಿ ನಿಂತಿದ್ದು, ಜಗತ್ತಿನ ಅತೀ ಎತ್ತರದ ಪುತ್ಥಳಿಯೆಂಬ (182 ಮೀ.) ದಾಖಲೆಗೆ ಪಾತ್ರವಾಗಿದೆ. ಆ ಪುತ್ಥಳಿ ಮತ್ತಾರದಲ್ಲ, ಸರದಾರ್ ವಲ್ಲಭಬಾಯಿ ಪಟೇಲ್!
1875 ಅಕ್ಟೋಬರ್ 31 ರಂದು ಜನಿಸಿದ ಸರದಾರ್ ಪಟೇಲ್, ಅತೀ ಕಡು ಬಡತನದಿಂದ ಮೇಲೆ ಬಂದವರು. ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ನೋವು, ದುಃಖ, ಕಷ್ಟಗಳನ್ನು ಅತೀ ಹತ್ತಿರದಿಂದ ನೋಡಿ, ನೋಡಿ ತನ್ನ ಮನಸ್ಸು ಗಟ್ಟಿ ಮಾಡಿಕೊಂಡು ಬೆಳೆದಿದ್ದರು. ಬಹುಷಃ ಇದೊಂದೆ ಕಾರಣಕ್ಕಾಗಿಯೇ ಅವರು ಭಾರತದ ರಾಜಕೀಯ ಇತಿಹಾಸದಲ್ಲಿಯೇ ಉಕ್ಕಿನ ಮನುಷ್ಯನಾಗಿ ಹೊರಹೊಮ್ಮಿರಬೇಕು ಎಂದೆನಿಸುತ್ತದೆ.
ಅದು ಫೆಬ್ರುವರಿ 20, 1947 ಇಸ್ವಿ. ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲೆ ಸ್ವಾತಂತ್ರ್ಯ ಭಾರತ ಕಾಯ್ದೆ-1947 ಜಾರಿಗೆ ತಂದನು. ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೇ ಜೂನ್ 30, 1948ರ ಹೊತ್ತಿಗೆ ಭಾರತ ದೇಶದಲ್ಲಿ ಬ್ರಿಟಿಷ್ ಸರಕಾರದ ಆಳ್ವಿಕೆಯನ್ನು ಕೊನೆಗೊಳಿಸುವುದಲ್ಲದೇ ಭಾರತ ದೇಶವನ್ನು ಸರ್ವತಂತ್ರ ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸುವುದು. ಈ ಕಾಯ್ದೆ ಅಸಂಖ್ಯಾತ ಭಾರತೀಯರ ಸಂತೋಷಕ್ಕೆ ಕಾರಣವಾಯಿತು. ಈ ಕಾಯ್ದೆ ಪರಿಣಾಮ ಸ್ವಾತಂತ್ರ್ಯ ಹೋರಾಟದಲ್ಲಿನ ಮುಂಚೂಣಿಯಲ್ಲಿರುವ ಮುಖಂಡರುಗಳಿಗೆ ಹಾಗೂ ಸಮಸ್ತ ದೇಶ ಬಾಂಧವರಿಗೆ ಸ್ವಾತಂತ್ರ್ಯ ಸಿಗುವ ಎಲ್ಲ ಲಕ್ಷಣಗಳು ಗೋಚಲಾರಂಭಿಸಿದವು. ಈ ಕಾಯ್ದೆ ಜಾರಿಯಾದ ನಂತರದಲ್ಲಿ ಭಾರತ ದೇಶ ಸ್ವತಂತ್ರಗೊಂಡ ಬಳಿಕ ಯಾರು ದೇಶದ ಪ್ರಧಾನಿ ಆಗುವುದು? ಎಂಬ ಲೆಕ್ಕಾಚಾರ ಒಳಗೊಳಗೆ ಮೆಲ್ಲಗೆ ಶುರುವಾಯಿತು.
ಅಂದಿನ ಪರಿಸ್ಥಿತಿಯನ್ವಯ ಸರದಾರ್ ವಲ್ಲಭಬಾಯಿ ಪಟೇಲ್ ದೇಶದ ಮೊದಲ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುತ್ತಾರೆ ಎಂದು ದೇಶದ ಜನರು ನಂಬಿದ್ದರು. ಇದಕ್ಕೆ ಕಾರಣವೂ ಇತ್ತು. ಸುಮಾರು 16 ರಾಜ್ಯಗಳ ಪೈಕಿ 13 ರಾಜ್ಯಗಳು ಸರದಾರ್ ವಲ್ಲಭಬಾಯಿ ಪಟೇಲ್ರ ಹೆಸರನ್ನು ಸೂಚಿಸಿದ್ದವು. ಇಷ್ಟಿದ್ದರೂ ಸರದಾರ್ ವಲ್ಲಭಬಾಯಿ ಪಟೇಲ್ರು ಪ್ರಧಾನಿ ಆಗಲಿಲ್ಲ ಎಂಬುದು ಬೇರೆ ಮಾತು.
ಆದರೆ ಅಂದು ಸರದಾರ್ ಪಟೇಲ್ರು ಮನಸ್ಸು ಮಾಡಿ ನನಗೆ ಅಧಿಕಾರವೇ ಮುಖ್ಯ ಎಂದು ಹಠಹಿಡಿದು, ಮಹಾತ್ಮ ಗಾಂಧೀಜಿ ಎದುರು ನಿಂತಿದ್ದರೇ ಬಹುಷಃ ನಮ್ಮ ದೇಶದ ಪ್ರಧಾನ ಮಂತ್ರಿಗಳ ಲಿಸ್ಟ್ನಲ್ಲಿ ಪ್ರಥಮ ಪ್ರಧಾನಿಯಾಗಿ ಸರದಾರ್ ವಲ್ಲಭಬಾಯಿ ಪಟೇಲ್ರ ಹೆಸರು ಕಂಡು ಬರುತ್ತಿತ್ತೇನೋ(?) ಆದರೆ ಅವರು ಮನಸ್ಸು ಮಾಡಲಿಲ್ಲ. ಇಲ್ಲಿ ಮನಸ್ಸು ಮಾಡಲಿಲ್ಲ ಎನ್ನುವುದಕ್ಕಿಂತ ಸರದಾರ್ ಪಟೇಲ್ರು ಪ್ರಧಾನಿ ಹುದ್ದೆಗಾಗಿ ಸಣ್ಣತನ ತೋರಲಿಲ್ಲ ಎಂಬುದನ್ನು ಗಮನಿಸಬೇಕು.
ಭಾರತಕ್ಕೆ ಸ್ವತಂತ್ರ ಸಿಕ್ಕ ನಂತರದಲ್ಲಿ ದೇಶದ ಮೊದಲ ಪ್ರಧಾನಿಯಾಗಿ ಪಂಡಿತ ಜವಾಹರಲಾಲ್ ನೆಹರು ಆಯ್ಕೆಯಾದರು. ಜವಾಹರಲಾಲ್ ನೆಹರು ಅವರ ಮಂತ್ರಿ ಮಂಡಲದಲ್ಲಿ ದೇಶದ ಮೊದಲ ಉಪ ಪ್ರಧಾನಿಯಾಗಿ ಹಾಗೂ ಗೃಹ ಮಂತ್ರಿಯಾಗಿ ಸರದಾರ್ ವಲ್ಲಭಬಾಯಿ ಪಟೇಲ್ ಅಧಿಕಾರ ವಹಿಸಿಕೊಂಡರು. ಆದರೆ ಪಟೇಲ್ ನಡೆಯುವ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲು ಮುಳ್ಳುಗಳಿಂದ ಕೂಡಿತ್ತು. ಸುಮಾರು ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ-ಪುಟ್ಟ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ನಮ್ಮ ದೇಶವನ್ನು ಒಗ್ಗೂಡಿಸುವ ಮಹತ್ತರವಾದ ಜವಾಬ್ದಾರಿ ಅವರ ಹೆಗಲಿಗಿತ್ತು. ಅದೆಷ್ಟೊ ಜನ, ಇದು ಪಟೇಲ್ರಿಂದ ಸಾಧ್ಯವೇ? ಅಂದುಕೊಂಡಿದ್ದರು. ಆದರೆ ಪಟೇಲ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರ ನಿಜವಾದ ತಾಕತ್ತು ಗೊತ್ತಿತ್ತು.
ಆದರೂ ಒಬ್ಬರ ಮನವೊಲಿಸುವುದೇ ಕಷ್ಟಕರವಾದ ದಿನಮಾನಗಳಲ್ಲಿ ಇಡೀ ದೇಶದ ಜನರ ಮನವೊಲಿಸಲು ಸಾಧ್ಯವೇ..? ಹೀಗೆ ಒಗ್ಗೂಡಿಸುವುದು ಕಷ್ಟಕರವಾದ ಕೆಲಸವಾಗಿತ್ತು. ಇದು ಅಂದುಕೊಂಡಷ್ಟೂ ಸುಲಭವಾದ ಮಾತಾಗಿರಲಿಲ್ಲ ಕೂಡ. ಆದರೂ ಸರದಾರ್ ಪಟೇಲ್ರು ಛಲ ಬಿಡದೇ ಭಾರತಾಂಭೆಯ ಮಕ್ಕಳನ್ನು ಒಗ್ಗೂಡಿಸಲೇ ಬೇಕೆಂದು ತನ್ನ ಕೆಲಸ ಶುರುವಿಟ್ಟುಕೊಂಡರು. ಈ ಕಾರ್ಯದಲ್ಲಿ ಹತ್ತು ಹಲವು ಅಡ್ಡಿಗಳು ಬಂದವು. ಆದರೂ ಪಟೇಲ್ರು ದೃತಿಗೆಡಲಿಲ್ಲ ಮತ್ತು ಹಿಂದೆ ಸರಿಯಲಿಲ್ಲ.
ಬ್ರಿಟಿಷ್ರ ಒಡೆದು ಆಳುವ ನೀತಿಯಿಂದಾಗಿ ಒಡೆದು ಹೋಳು, ಹೋಳಾಗಿದ್ದ ಸಂಸ್ಥಾನಗಳನ್ನು ಕೇವಲ ತನ್ನ ಚಾಣಾಕ್ಷ್ಯತನದಿಂದ ಒಗ್ಗೂಡಿಸಲು ಆರಂಭಿಸಿದರು. ಹೈದರಾಬಾದ್ ನಿಜಾಮ್ ಹಾಗೂ ಕಾಶ್ಮೀರದ ರಾಜ ಹರಿಸಿಂಗ್ ಸೇರಿದಂತೆ ಹತ್ತು ಹಲವರನ್ನು ಎದುರು ಹಾಕಿಕೊಂಡರು. ಹಲವಾರು ಸಂಘರ್ಷಗಳನ್ನು ಧೈರ್ಯದಿಂದ ಎದುರಿಸಿದರು. ಕೊನೆಯಲ್ಲಿ ತಾನು ಅಂದುಕೊಂಡಂತೆ ಅಖಂಡ ಭಾರತ ದೇಶವನ್ನು ಒಗ್ಗೂಡಿಸಿದ ಕಾರ್ಯವನ್ನು ಮುಗಿಸಿ ಸಮಸ್ತ ದೇಶದ ಜನರ ಪ್ರೀತಿಗೆ ಪಾತ್ರರಾದರು. ಇದು ನಿಜವಾದ ಎದೆಗಾರಿಕೆ.
ಇಂತಹ ದಿಟ್ಟ ಎದೆಗಾರಿಕೆಯನ್ನು ತೋರಿಸಿ ನಮ್ಮ ದೇಶವನ್ನು ಒಗ್ಗೂಡಿಸಿದ, ಸರದಾರ್ನಿಗೆ ಇಂದಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿಜವಾದ ಗೌರವವನ್ನು ನೀಡಿದೆ. ದೇಶದ ನಾನಾ ಭಾಗಗಳಿಂದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಜಗತ್ತಿನ ಅತೀ ಎತ್ತರ ಪುತ್ಥಳಿ ನಿಮರ್ಿಸಿದ್ದು, ಇತಿಹಾಸವೇ ಸರಿ. ಈ ಮಹತ್ತರ ಕಾರ್ಯದಲ್ಲಿ ನಮ್ಮ ನೆಲದಿಂದ ಅಲ್ಪ ಪ್ರಮಾಣದ ಕಚ್ಚಾ ವಸ್ತುಗಳು ರವಾನೆಯಾಗಿದೆ ಎಂಬುದು ನಮಗೂ ಸಂತೋಷವೇ ಸರಿ.
ಏಕತೆಯ ಮನೋಭಾವನೆಯನ್ನು ಸಾರಿದ ಸರದಾರ್ ವಲ್ಲಭಬಾಯಿ ಪಟೇಲ್ ಅವರ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡಿದ್ದರೂ ಪಟೇಲ್ರೇಕೆ ಪ್ರಧಾನಿ ಆಗಲಿಲ್ಲ(?) ಎಂಬ ನೋವು ಮಾತ್ರ ಇಂದಿಗೂ ಕಾಡುತ್ತಲೇ ಇದೆ ಎಂಬುದಂತೂ ಸುಳ್ಳಲ್ಲ!