ಕಾರವಾರ

ಸಹೋದರ - ಸಹೋದರಿ ಬಾಂಧವ್ಯದ ಸಂಕೇತ ರಕ್ಷಾ ಬಂಧನ!

ಸಹೋದರ - ಸಹೋದರಿ ಬಾಂಧವ್ಯದ ಸಂಕೇತ ರಕ್ಷಾ ಬಂಧನ!

ಮುಂಡಗೋಡ 26 : ರಕ್ಷಾ ಬಂಧನ ಹಬ್ಬ ಹತ್ತಿರವಾಗುತ್ತಿದ್ದಂತೆ ಮುಂಡಗೋಡ ಪಟ್ಟಣದ ಮಾರುಕಟ್ಟೆಯಲ್ಲಿ ರಾಖಿಗಳ ಖರೀದಿ ಭರಾಟೆ ಜೋರಾಗಿದೆ. ರಾಖಿಯ ಬೆಲೆಯಷ್ಟೇ ಅಲ್ಲ, ಸಹೋದರನ ಕೈಗೆ ಕಟ್ಟುವ ರಾಖಿ ಹೇಗಿರಬೇಕು ಎಂಬ ಆಯ್ಕೆಯಲ್ಲೇ ಸಹೋದರಿಯರ ಖುಷಿ ಅಡಗಿದೆ. ಸಹೋದರನ ಕೈಗೆ ಈ ಬಾರಿ ಯಾವ ರಾಖಿ ಕಟ್ಟಿದರೆ ಚೆನ್ನಾಗಿರುತ್ತದೆ? ಎಂಬ ಚಿಂತನೆಯಲ್ಲೇ ವಿವಿಧ ಬಣ್ಣ, ವಿನ್ಯಾಸ ಹಾಗೂ ಮಾದರಿಯ ರಾಖಿಗಳನ್ನು ನೋಡಿ ಆಯ್ಕೆ ಮಾಡುತ್ತಿರುವ ಬಾಲಕಿಯರ ದೃಶ್ಯಗಳು ಗಮನ ಸೆಳೆಯುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ರಾಖಿ ಖರೀದಿಗಾಗಿ ಬಾಲಕಿಯರು ಹಾಗೂ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಅಂಗಡಿಗಳಲ್ಲಿ ಹಬ್ಬದ ಕಳೆ ಕಾಣಿಸುತ್ತಿದೆ. ಪಟ್ಟಣದ ಕೋರ್ಟ್‌ ಎದುರಿನ ಮಕ್ಯೂಲಿಯಾ ಸ್ಟೇಶನರಿ ಅಂಗಡಿಯಲ್ಲಿ ಬಾಲಕಿಯೊಬ್ಬಳು ಸಹೋದರನಿಗಾಗಿ ರಾಖಿಗಳನ್ನು ಒಂದೊಂದಾಗಿ ವೀಕ್ಷಿಸಿ, ತನ್ನ ಆಯ್ಕೆಯ ರಾಖಿಗಾಗಿ ಹುಡುಕಾಟ ನಡೆಸುತ್ತಿದ್ದ ಕ್ಷಣ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ರಕ್ಷಾ ಬಂಧನದ ದಿನ ಸಹೋದರನ ಕೈಗೆ ರಾಖಿ ಕಟ್ಟಿ, ಸಹೋದರ-ಸಹೋದರಿಯ ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉತ್ಸಾಹ ಈಗಾಗಲೇ ಮಾರುಕಟ್ಟೆಯಲ್ಲಿ ಗೋಚರಿಸುತ್ತಿದೆ. 


ಸುದ್ದಿ ಓದಿ