ಗೋಶಾಲೆಯಲ್ಲಿ ರಕ್ಷಾಬಂಧನ ಸಂಭ್ರಮ: ಹಸುಗಳಿಗೆ ಪೂಜೆ, ಸಹಪಾಠಿಗಳಿಗೆ ರಾಖಿ ಕಟ್ಟಿ ಭಾವೈಕ್ಯತೆ ಸಂದೇಶ
ಲೋಕದರ್ಶನ ವರದಿ
ಮಹಾಲಿಂಗಪುರ, ಆ.28: ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವಜಂತುಗಳ ಮೇಲಿನ ಪ್ರೀತಿಯನ್ನು ಸಾರುವ ವಿಶಿಷ್ಟ ರಕ್ಷಾಬಂಧನ ಕಾರ್ಯಕ್ರಮವನ್ನು ಸ್ಥಳೀಯ ಜೆಸಿಐ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಆಚರಿಸಲಾಯಿತು.
ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರು ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರೀ ಗುರು ಮಹಾಲಿಂಗೇಶ್ವರ ಗೋಶಾಲೆಗೆ ಭೇಟಿ ನೀಡಿ, ಗೋಮಾತೆಯನ್ನು ಭಕ್ತಿಭಾವದಿಂದ ಪೂಜಿಸಿದರು. ಹಣ್ಣು-ಹಂಪಲು ಹಾಗೂ ಆಹಾರವನ್ನು ನೀಡಿ ಗೋವುಗಳ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಇರುವ ವಿಶೇಷ ಸ್ಥಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜತೆಗೆ, ಪ್ರಾಣಿ-ಪಕ್ಷಿಗಳ ಮೇಲೆಯೂ ಪ್ರೀತಿ, ದಯೆ ಹಾಗೂ ಕರುಣೆ ಇರಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ನಂತರ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಗೆ ರಾಖಿ ಕಟ್ಟಿ, ಅಣ್ಣ-ತಂಗಿಯರ ಬಾಂಧವ್ಯದ ಮಹತ್ವವನ್ನು ಸ್ಮರಿಸಿದರು. ರಾಖಿ ಕೇವಲ ಒಂದು ದಾರವಲ್ಲ; ಅದು ಪ್ರೀತಿ, ವಿಶ್ವಾಸ, ರಕ್ಷಣೆ ಹಾಗೂ ಆತ್ಮೀಯತೆಯ ಸಂಕೇತವಾಗಿದೆ ಎಂಬ ಭಾವನೆ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ವಿದ್ಯಾರ್ಥಿಗಳ ಮುಖದಲ್ಲಿನ ಸಂತಸ, ಪರಸ್ಪರ ವ್ಯಕ್ತಪಡಿಸಿದ ಪ್ರೀತಿ ಹಾಗೂ ಗೋಸೇವೆಯ ಮೂಲಕ ಮೂಡಿಬಂದ ಮಾನವೀಯ ಮೌಲ್ಯಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದು ಅಗತ್ಯ ಎಂಬ ಸಂದೇಶವೂ ಈ ಆಚರಣೆಯಿಂದ ಹೊರಹೊಮ್ಮಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ಅರ್ಚಕ ಸಿದ್ಧಯ್ಯ ಮಠದ, ಶ್ರೀಶೈಲ ಮಠದ, ಮುಖ್ಯೋಪಾಧ್ಯಾಯ ಎಸ್.ಜಿ. ಕೌಜಲಗಿ, ಶಿಕ್ಷಕರಾದ ಎಸ್.ಬಿ. ಮಠಗಾರ, ಆರಿ್ಜ. ಹುದ್ದಾರ ಸೇರಿದಂತೆ ಇತರ ಶಿಕ್ಷಕರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯರ ವಿನೂತನ ಹಾಗೂ ಭಾವಪೂರ್ಣ ಆಚರಣೆಯನ್ನು ಶ್ಲಾಘಿಸಿದರು.