ಜೀವನದ ಉನ್ನತಿಗೆ ಧರ್ಮ ಪರಿಪಾಲನೆ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಜೀವನದ ಉನ್ನತಿಗೆ ಧರ್ಮ ಪರಿಪಾಲನೆ ಮುಖ್ಯ: ಶ್ರೀ  ರಂಭಾಪುರಿ ಜಗದ್ಗುರುಗಳು

        ಜೇವರ್ಗಿ-ಜನೆವರಿ-24: ಸುಖ ಶಾಂತಿಗೆ ಧರ್ಮವೇ ಮೂಲ. ಮಾತು ಮನ ಕೃತಿಯಿಂದ ಒಂದಾಗಿ ಬಾಳಿದರೆ ಜೀವನದ ಉನ್ನತಿ ಸಾಧ್ಯ. ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಪರಿಪಾಲನೆ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.  

  ಅವರು ಶನಿವಾರ ಮಾಗಣಗೇರಾ ಶ್ರೀ ರುದ್ರಮುನೀಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರದ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಆಧುನಿಕತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ಧರ್ಮ ಮತ್ತು ಸಂಸ್ಕೃತಿ ನಾಶಗೊಳ್ಳಬಾರದು. ಧರ್ಮದಿಂದ ಮನುಷ್ಯ ವಿಮುಖನಾದರೂ ಅಪಾಯ ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಹೊತ್ತ ಭೂಮಿ ಹೆತ್ತ ತಾಯಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಎಂದರು.  

ಸಾನ್ನಿಧ್ಯ ವಹಿಸಿದ್ದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ. ಮರೆವು ದೂರ ಮಾಡಿ ಅರಿವು ಮೂಡಿಸುವ ಕೆಲಸ ಶ್ರೀ ಗುರುವಿನಿಂದ ಮಾತ್ರ ಸಾಧ್ಯ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದರು. 

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಂದಗಿ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಜೀವನದಲ್ಲಿ ಉನ್ನತಿ ಬಯಸುವ ಮನುಷ್ಯ ಶ್ರೀ ಗುರುವಿನ ಮಾತನ್ನು ಮೀರಿ ಮರೆಯಬಾರದು. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಜ್ಞಾನ ಕಳೆಯಲು ಗುರು ಬೇಕು. ಅರಿವು ಆದರ್ಶಗಳನ್ನು ಅರಹುವಾತನೇ ನಿಜವಾದ ಗುರುವೆಂದರು. ಮಾಗಣಗೇರಿ ಬೃಹನ್ಮಠದ ಡಾಽಽ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆಲೂರು ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯ ಸ್ವಾಮಿಗಳನ್ನು ಮೊದಲ್ಗೊಂಡು ಸುಮಾರು 15 ಜನ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅನೇಕ ದಾನಿಗಳಿಗೆ ಮತ್ತು ಗಣ್ಯರಿಗೆ ಉಭಯ ಜಗದ್ಗುರುಗಳು ಗುರುರಕ್ಷೆಯಿತ್ತು ಹರಸಿದರು.  

ಸಮಾರಂಭಕ್ಕೂ ಮುನ್ನ ಮಾಗಣಗೇರಾ ಗ್ರಾಮದಲ್ಲಿ ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಉಭಯ ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. 


ಸುದ್ದಿ ಓದಿ