‘ಎಷ್ಟೇ ಮಾಟಮಂತ್ರ ಮಾಡಿದ್ರೂ ಜನ ನಂಬಲ್ಲ’ : ಕಾಂಗ್ರೆಸ್ ಕಪ್ಪು ಬಟ್ಟೆ ಪ್ರತಿಭಟನೆಗೆ ಪ್ರಧಾನಿ ವಾಗ್ದಾಳಿ
ಹೊಸದಿಲ್ಲಿ: ಆಗಸ್ಟ್ 10: ಪಾಣಿಪತ್‌ನಲ್ಲಿ 909 ಕೋಟಿ ರೂಪಾಯಿ ವೆಚ್ಚದಲ್ಲಿ 35 ಎಕರೆ ಪ್ರದೇಶದಲ್ಲಿ ಎರಡನೇ ತಲೆಮಾರಿನ (2ಜಿ) ಎಥೆನಾಲ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಇದಾದ ಬಳಿಕ ಈ ಹಿಂದೆ ಕಪ್ಪುಪಟ್ಟಿ ಧರಿಸಿ ಸರ್ಕಾರವನ್ನು ವಿರೋಧಿಸಿದ್ದಕ್ಕೆ ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲೂ ಕೆಲವರು ನಕಾರಾತ್ಮಕತೆಯ ಸುಳಿಯಲ್ಲಿ ಸಿಲುಕಿ ಹತಾಶೆಯಲ್ಲಿ ಮುಳುಗಿದ್ದಾರೆ. ಸರ್ಕಾರದ ವಿರುದ್ಧ ಸುಳ್ಳು ಹೇಳಿದರೂ ಸಾರ್ವಜನಿಕರು ಅಂಥವರನ್ನು ನಂಬಲು ಸಿದ್ಧರಿಲ್ಲ. ಹತಾಶೆಯಲ್ಲಿ ಕಾಂಗ್ರೆಸ್ ನಾಯಕರು ಈಗ ಮಾಟಮಂತ್ರದ ಕಡೆಗೆ ತಿರುಗುತ್ತಿರುವುದು ಕಂಡುಬರುತ್ತಿದೆ ಎಂದರು.
ಕಾರ್ಯಕ್ರಮದ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ‘ಆಗಸ್ಟ್ 5 ರಂದು ಬ್ಲ್ಯಾಕ್ ಮ್ಯಾಜಿಕ್ ಅನ್ನು ಮಾಡುವ ಪ್ರಯತ್ನವನ್ನು ನಾವು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರೆ ತಮ್ಮ ಹತಾಶೆ ಅವಧಿ ಮುಗಿಯಲಿದೆ ಎಂದು ಕಾಂಗ್ರೆಸ್ನವರು ತಿಳಿದುಕೊಂಡಿದ್ದಾರೆ. ಆದರೆ ಅವರು ಎಷ್ಟೇ ಅಬ್ಬರಿಸಿದರೂ, ಎಷ್ಟೇ ಮ್ಯಾಜಿಕ್ ಮಾಡಿದ್ರೂ, ಸಾರ್ವಜನಿಕರ ವಿಶ್ವಾಸವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿತಿಲ್ಲ ಎಂದರು.
ಇದೇ ವೇಳೆ ಪ್ರಧಾನಿಯವರ ಈ ಆರೋಪಗಳಿಗೆ ಕಾಂಗ್ರೆಸ್ ತಕ್ಷಣ ಪ್ರತಿಕ್ರಿಯಿಸಿದ್ದು, ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. “ಕಪ್ಪು ಹಣವನ್ನು ತರಲು ಅವರಿಗೆ ಸಾಧ್ಯವಾಗಲಿಲ್ಲ, ಈಗ ಅವರು ಕಪ್ಪು ಬಟ್ಟೆಯ ಬಗ್ಗೆ ಅರ್ಥಹೀನ ವಿಷಯವನ್ನು ಮಾಡುತ್ತಿದ್ದಾರೆ. ಪ್ರಧಾನಿ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆಂದು ದೇಶ ಇಚ್ಚಿಸುತ್ತದೆ, ಆದರೆ ಜುಮ್ಲಾ ಜೀವಿ ಏನೇನೋ ಮಾತನಾಡುತ್ತಿರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.