ಮಾರಿಕಾಂಬಾ ಜಾತ್ರೆ ಸಿದ್ದತೆ; ಗೋಪುರಕ್ಕೆ ವಿಶೇಷ ಬಣ್ಣ; ಸಾರ್ವಜನಿಕರಿಂದ ಪ್ರಶಂಸೆೆ
ಸಾಗರ 29 : ಇಲ್ಲಿನ ಇತಿಹಾಸ ಪ್ರಸಿದ್ದ ಮಾರಿಕಾಂಬಾ ಜಾತ್ರೆ ಸಿದ್ದತೆ ಭರದಿಂದ ಸಾಗಿದೆ. ದೇವಸ್ಥಾನ ಗೋಪುರಕ್ಕೆ ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ವಿಶೇಷವಾಗಿ ಬಣ್ಣ ಮಾಡಿದ್ದು ಗೋಪುರ ಸಮಿತಿ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಒಳಗಾಗಿದೆ. ಮಾರಿಕಾಂಬಾ ಜಾತ್ರಾ ಗೋಪುರ ಸಮಿತಿ ಸಂಚಾಲಕ ಪುರುಷೋತ್ತಮ್ ಅತ್ಯಂತ ಆಸಕ್ತಿಯಿಂದ ಈ ಬಾರಿ ಗೋಪುರಕ್ಕೆ ಬಣ್ಣ ಹೊಡೆಸುವ ಪ್ರಯತ್ನ ನಡೆಸಿದ್ದು ವಿಶೇಷವಾಗಿದೆ. ಅಮ್ಮನವರ ದೇವಸ್ಥಾನ, ರುದ್ರಭೂಮಿ, ಅಮ್ಮನವರ ಮೂಲ ಸ್ಥಾನ ಸೇರಿ ಎಲ್ಲ ಕಡೆಯೂ ಬಣ್ಣವನ್ನು ಹೊಡೆಸುವ ಮೂಲಕ ಗೋಪುರ ಸಮಿತಿ ತನ್ನ ಜವಾಬ್ದಾರಿ ನಿಭಾಯಿಸಿದೆ.
ಕುಸ್ತಿ ಅಖಾಡ-ವಸ್ತು ಪ್ರದರ್ಶನ ಸ್ಥಳ ಪೂಜೆ : ಮಾರಿಕಾಂಬಾ ಜಾತ್ರೆಯಲ್ಲಿ ಅತ್ಯಂತ ವಿಶೇಷವಾಗಿ ದೇಶದ ಗಮನ ಸೆಳೆಯುವುದು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ. ದೇಶದ ಬೇರೆಬೇರೆ ರಾಜ್ಯಗಳಿಂದ ಮಾರಿಕಾಂಬಾ ಜಾತ್ರೆಯ ಕುಸ್ತಿ ಪಂದ್ಯಾವಳಿಗೆ ಪೈಲ್ವಾನರು ಬರುತ್ತಾರೆ. ಒಲಿಂಪಿಕ್ಸ್, ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಪೈಲ್ವಾನರು ಸಾಗರದ ಬಯಲು ಕುಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಅಧ್ಯಕ್ಷರಿಂದ ಪೂಜೆ :
ಮಾರಿಕಾಂಬಾ ಜಾತ್ರೆಗೆ ಅಗತ್ಯ ಸಿದ್ದತೆ ನಡೆದಿದ್ದು, ಶಾಸಕರ ಮಾರ್ಗದರ್ಶನದಲ್ಲಿ ಜಾತ್ರಾ ಪೂರ್ವ ತಯಾರಿ ಬಹುತೇಕ ಮುಕ್ತಾಯಗೊಂಡಿದೆ ಎಂದು ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ತಿಳಿಸಿದರು. ಇಲ್ಲಿನ ನೆಹರೂ ಮೈದಾನದಲ್ಲಿ ಗುರುವಾರ ಮಾರಿಕಾಂಬಾ ನ್ಯಾಸ ಪ್ರತಿಷ್ಟಾನದ ವತಿಯಿಂದ ಕುಸ್ತಿ ಅಖಾಡ ತಯಾರಿ ಹಾಗೂ ವಸ್ತುಪ್ರದರ್ಶನ ಮಳಿಗೆ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಫೆ. 3ರಿಂದ ಜಾತ್ರೆ ನಡೆಯಲಿದ್ದು, ಇದರ ಪ್ರಯುಕ್ತ ಫೆ. 6ರಿಂದ 8ರವರೆಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈಗಾಗಲೆ ದೇಶಾದ್ಯಂತ ಕುಸ್ತಿ ಪಟುಗಳು ಪಂದ್ಯದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದು, ಫೋನ್ ಮೂಲಕ ವಿಚಾರಿಸುತ್ತಿದ್ದಾರೆ. ಈ ಬಾರಿ ಅತ್ಯಂತ ವಿಶೇಷವಾಗಿ ಕುಸ್ತಿ ಪಂದ್ಯಾವಳಿಯನ್ನು ಕುಸ್ತಿ ಸಮಿತಿ ಆಯೋಜಿಸಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಮಾತನಾಡಿ, ಮಾರಿಕಾಂಬಾ ಜಾತ್ರೆಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ವಿಶೇಷ ಗಮನ ಸೆಳೆಯುತ್ತದೆ. ದೇಶದ ಹೆಸರಾಂತ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಉತ್ತಮವಾದ ಅಖಾಡ ನಿರ್ಮಿಸಲು ಸಮಿತಿ ವತಿಯಿಂದ ಪೂಜೆ ನಡೆಸಿದೆ ಎಂದರು. ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್ ಮಾತನಾಡಿ, ಅಂಕೆ ಹಾಕುವ ಮೂಲಕ ಜಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿದೆ. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ಅಖಾಡ ನಿರ್ಮಾಣಕ್ಕೆ ಇಂದು ಚಾಲನೆ ಸಿಕ್ಕಿದ್ದು, ಬಯಲು ಕುಸ್ತಿ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೈಲ್ವಾನರು ಪಾಲ್ಗೊಳ್ಳಬೇಕು ಎಂದು ಹೇಳಿದರು. ಸಮಿತಿಯ ಖಜಾಂಚಿ ನಾಗೇಂದ್ರ ಕುಮಟಾ, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕುಸ್ತಿ ಸಮಿತಿ ಸಂಚಾಲಕ ಅಶೋಕ್, ಸಹ ಸಂಚಾಲಕ ಶಶಿಕಾಂತ ಎಂ.ಎಸ್., ಪ್ರಮುಖರಾದ ರವಿನಾಯ್ಡು, ಸಂತೋಷ್ ಸದ್ಗುರು, ಪುರುಷೋತ್ತಮ, ಬಸವರಾಜ್, ನವೀನ್ ಕೆ.ಸಿ., ತಾರಾಮೂರ್ತಿ, ಬಾಲಕೃಷ್ಣ ಗುಳೇದ್, ರಾಮು, ಲೋಕೇಶ್ ಕುಮಾರ್, ಗಂಗಾಧರ ಜಂಬಿಗೆ, ಆರ್. ಚಂದ್ರು ಇನ್ನಿತರರು ಹಾಜರಿದ್ದರು.