ಕೇಂದ್ರ ಹಾಗೂ ರಾಜ್ಯ ಸರಕಾರ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿರಿ : ರವೀಂದ್ರ
ಶಿಗ್ಗಾವಿ 23: ಪೌರಕಾರ್ಮಿಕರು ಆರೋಗ್ಯದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಭಾಗಲಕೋಟಿ ಹೇಳಿದರು. ಪಟ್ಡಣದ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಚ್ಚತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಪರಿಣಾಮಕಾರಿ ಸ್ವಚ್ಚತೆಗೆ ಪ್ರಭಾವ ಬೀರುತ್ತದೆ ಆದ್ದರಿಂದ ಸಾರ್ವಜನಿಕರೂ ಸಹಿತ ಸಹಕಾರ ನೀಡಬೇಕು, ಪೌರಕಾರ್ಮಿಕರ ಆರೋಗ್ಯ, ಸೌಲಭ್ಯಗಳು ಮತ್ತು ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಕಲ್ಪಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.
ಪುರಸಭೆ ವ್ಯವಸ್ಥಾಪಕಿ ಮಂಗಳಗೌರಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದ ನಿಗದಿತ ಅವಧಿಯಲ್ಲಿ ಸೌಲಭ್ಯಗಳನ್ನ ತಲುಪಿಸುವ ಕಾರ್ಯ ಮಾಡಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಜೊತೆಗೆ ಸ್ವಚ್ಚತೆ, ಆರೋಗ್ಯದ ಬಗ್ಗೆ ಖಾಳಜಿ, ವಿಮಾ ಪಾಲಸಿ, ಕುಟುಂಬದ ರಕ್ಷಣೆಯೊಂದಿಗೆ ಆರೊಗ್ಯ ರಕ್ಷಣೆ ನಿಮ್ಮ ಕರ್ತವ್ಯವಾಗಲಿ ಎಂದರು. ಮುಖಂಡ ಸುರೇಶ ಹರಿಜನ ಮಾತನಾಡಿ ಪೌರಕಾರ್ಮಿಕರ ಮೇಲೆ ಕೆಲ ವೇಳೆಯಲ್ಲಿ ದೌರ್ಜನ್ಯಗಳು ನಡೆದ ಪ್ರಕರಣಗಳು ಜರುಗಿವೆ ಅದು ಆಗಬಾರದು, ಪಟ್ಟಣದ ಸುರಕ್ಷತೆಯ ಜೊತೆಗೆ ತಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕು ಎಂದರು.
ಪೌರಕಾರ್ಮಿಕರ ಸಂಘದ ಉಪಾದ್ಯಕ್ಷ ಶಾಂತಪ್ಪ ದೊಡ್ಡಮನಿ ಮಾತನಾಡಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನೀಡಿದ ಸುರಕ್ಷತೆಯ ಸಲಕರಣೆಗಳನ್ನ ಧರಿಸುತ್ತಿಲ್ಲ, ಸಲಕರಣೆಗಳನ್ನ ತಪ್ಪದೇ ಬಳಸಿ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಪುರಸಭೆ ಶಿವಕುಮಾರ ಹಲಗಣ್ಣವರ, ಪೌರನೌಕರರ ಸಂಘದ ಕಾರ್ಯದರ್ಶಿ ಯಲ್ಲಪ್ಪ ಹಾದಿಮನಿ, ಮಂಜುನಾಥ ಕಟ್ಟಿಮನಿ, ಲಕ್ಷ್ಮವ್ವ ಬಳ್ಳಾರಿ, ಭಾರತಿ ಬಳ್ಳಾರಿ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಇದ್ದರು.ಲಕ್ಷ್ಮಣ ಪೂಜಾರ ಪ್ರಾರ್ಥಿಸಿದರು. ಸಿಬ್ಬಂದಿ ಕಾಂತೇಶ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು.