ಕಥೆ ಮತ್ತು ವಿಶೇಷ ಲೇಖನಗಳು

ಪೆನ್ಸಿಲಿನಂತೆ ನಾವಾಗೋಣ

ಪೆನ್ಸಿಲಿನಂತೆ ನಾವಾಗೋಣ

-ವೇದಾವತಿ ಎಚ್.ಎಸ್.  

ಬೆಂಗಳೂರು 

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತನ್ನ ಸ್ವಂತ ಸಂಬಂಧಿಗಳಿಂದಲೂ, ಸ್ನೇಹ ಸಂಬಂಧಿಗಳಲ್ಲಿದಂಲೂ ನೋವು ಅನುಭವಿಸಿರುತ್ತೇವೆ. ನಾವು ಕಷ್ಟದಲ್ಲಿದ್ದಾಗಲೇ ನಮ್ಮನ್ನು ಪರೀಕ್ಷೆ ಮಾಡುವ ಜನರೇ ಹೆಚ್ಚು.  ಕೆಲವೊಮ್ಮೆ ಕೆಟ್ಟ ಪರಿಸ್ಥಿತಿಯಲ್ಲಿ ನಮಗೆ ಹತ್ತಿರದ ಬಂಧುಗಳೇ ನಮ್ಮನ್ನು ಬಾವಿಗೆ ತಳ್ಳುವುದು ಜಾಸ್ತಿ. ಸಹಾಯದ ಬಿಕ್ಷೆಯನ್ನು ಬೇಡಿದರಂತೂ ತಲೆಗೊಂದು ಮಾತನಾಡುವ ಆನೇಕ ಜನರಿದ್ದಾರೆ. ಅಂತಹ ಸಂದರ್ಭದಲ್ಲಿ ಧೃತಿಗೆಡದೆ ದಿಟ್ಟವಾಗಿ ನಮಗೆ ಬಂದಿರುವ ಕಷ್ಟಗಳನ್ನು ಎದುರಿಸಲು ತಯಾರಾಗಿರಬೇಕು. ಅವರು ನಮ್ಮನ್ನು ಬೇರೆ ಭಾವನೆಯಿಂದ ತಿಳಿದಂತೆ ನಾವು ಸೋತು ಸೊರಗಿ ಹೋಗಬಾರದು. ಅಂತಹ ಮಂದಿಯ ಎದುರು ತಲೆಯೆತ್ತಿ ನಿಲ್ಲಬೇಕು. 

ಕೆಲವೊಮ್ಮೆ ಸಂಬಂಧಗಳಲ್ಲಿ ಉಂಟಾಗುವ ನೋವು ನಮಗೆ ಜೀವನದಲ್ಲಿ ಒಳ್ಳೆಯ ಪಾಠವನ್ನೇ ಕಲಿಸುತ್ತದೆ. ನಾವು ಅವರ ಮುಂದೆ ಸೋತಾಗ ಆ ಸೋಲಿನಿಂದ ಪುಟಿದೇಳುವ ಒಳ್ಳೆಯ ಅವಕಾಶಗಳು ನಮಗೆ ಅರಿವಿಲ್ಲದೆ ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಎಂತಹ ಭಿನ್ನಾಭಿಪ್ರಾಯಗಳಿದ್ದರೂ ಅವುಗಳು ನಮಗೆ ಪಾಠವಾಗಲಿ, ಆದರೆ ಅದು ಜಗಳಕ್ಕೆ ಮೂಲವಾಗಲು ಬಿಡಬಾರದು. ಅಂತಹ ಸಂದರ್ಭಗಳಲ್ಲಿ ಅದರಿಂದ ದೂರವಿರುವುದು ಒಳಿತು. ಭಿನ್ನಭಿಪ್ರಾಯಗಳಿಗೆ ಬಲಿಯಾಗುವ ಬದಲು ಅವನ್ನು ಮೀರಿ ಬೆಳೆಯುವ ಶಕ್ತಿಯನ್ನು ನಾವು ಬೆಳೆಸಿ ಕೊಳ್ಳಬೇಕು. ನಮ್ಮ ಕಷ್ಟಗಳನ್ನು ಪವಿತ್ರತೆಯಲ್ಲಿರಿಸಿದರೆ, ಎಷ್ಟೋ ವಿಷಯಗಳನ್ನು ನಾವು ಅದರಿಂದ ಪಾಠ ಕಲಿಯಲು ಸಾಧ್ಯ. 

ಇಂಥ ಸಂದರ್ಭದಲ್ಲಿ ನನ್ನ ಕಣ್ಣೆದೆರು ಬಂದು ನಿಲ್ಲುವ ವಸ್ತುವೆಂದರೆ ಪೆನ್ಸಿಲ್! ನಾನು ಕಂಡುಕೊಂಡಂತೆ ಪೆನ್ಸಿಲ್ ಎಂದರೆ ಕೇವಲ ಬರೆಯುವ ಒಂದು ಸಾಧನವಲ್ಲ. ಸೂಕ್ಷವಾಗಿ ಅದನ್ನು ಗಮನಿಸಿದಾಗ ನಾವು ಹೇಗೆ ಬದುಕಬೇಕೆಂದು ಹೇಳಿಕೊಡುವ ಜೀವನಗುರು. ನಾನು ಶಾಲೆ ಹೋಗುವಾಗಿನಿಂದಲೂ ಪೆನ್ಸಿಲ್ ನನ್ನ ಮನಸ್ಸನ್ನು ತುಂಬ ಕಾಡಿದೆ.  ಇದನ್ನೊಂದು ಬರವಣಿಗೆ ಸಾಧನವಷ್ಟೇ ಎನ್ನದೇ ಇದನ್ನು ಹಲವು ಮಗ್ಗಲಿನಿಂದ ನೋಡುತ್ತಿದ್ದೆ. ಆಗ ನಾನು ಕಂಡುಕೊಂಡದ್ದೆಂದರೆ. ಮನುಷ್ಯ ಪೆನ್ಸಿಲ್ ಮಾದರಿಯಾಗಿಟ್ಟುಕೊಂಡು ಬದುಕಬೇಕು. ನನಗನ್ನಿಸಿದ ಕೆಲ ಅನ್ನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 

ಜೀವನದಲ್ಲಿ ಉದಾಹರಣೆಗೆ ಒಂದು ಪೆನ್ಸಿಲ್ ತೆಗೆದು ಕೊಂಡಾಗ: 

* ಪೆನ್ಸಿಲನ್ನು ಯಾರಾದರೂ ಹಿಡಿದು ಕೊಳ್ಳಲೇ ಬೇಕು. ಇಲ್ಲವಾದರೆ ಅದರಿಂದ ಪ್ರಯೋಜನವಿಲ್ಲ. ಅದೇ ರೀತಿಯಲ್ಲಿ ನಾವು ಸಹ. ಯಾವಾಗಲೂ ನಾವು ಉನ್ನತವಾದ ಧ್ಯೇಯವೊಂದನ್ನು ಹಿಡಿದು ಕೊಂಡಿರಬೇಕು. ಅದರಿಂದ ಒಳಿತು ಕಾಣಲು ಸಾಧ್ಯ. 

* ಪೆನ್ಸಿಲನ್ನು ನಾವು ಯಾವಾಗಲೂ ಕೆತ್ತಿ ಚೂಪು ಮಾಡುತ್ತಾ ಇರುತ್ತೆವೆ. ಹಾಗೇಯೇ ನಮ್ಮ ಜೀವನ. ಅದು ಚೂಪಾದ ನಂತರ ಬರೆದರೆ ಬರಹಗಳು ಸುಂದರವಾಗಿರುತ್ತದೆ. ಪೆನ್ಸಿಲನ್ನು ಚೂಪು ಮಾಡದಿದ್ದರೆ ಅದು ನಮಗೆ ಉಪಯೋಗಕ್ಕೆ ಬರುವುದಿಲ್ಲ. ಹಾಗೇಯೇ ನಮ್ಮ ಜೀವನ.ಉಳಿ ಪೆಟ್ಟು ಕೊಟ್ಟಾಗಲೆ ಕಲ್ಲು ಶಿಲೆಯಾಗುವುದು. ಜೀವನದಲ್ಲಿ ಕಷ್ಟಗಳು ಬಂದಷ್ಟು ಎತ್ತರಕ್ಕೆ ಏರಲು ಸಾಧ್ಯ.ಕಷ್ಟಗಳು ಬಂದಾಗ ಗಲಿಬಿಲಿಗೊಳ್ಳದೆ ಎದುರಿಸಲು ತಯಾರಾಗಿರಬೇಕು. 

* ಪೆನ್ಸಿಲಿನಲ್ಲಿ ಹೊರಗೆ ಹಾಕಿದ ಮರದ ಕವಚಕ್ಕಿಂತ ಒಳಗಿನ ಸೀಸದ ಕಡ್ಡಿಯೇ ಮುಖ್ಯ. ಸೀಸದ ಕಡ್ಡಿ ಇಲ್ಲದಿದ್ದರೆ ಅದು ವ್ಯರ್ಥವೇ ಸರಿ. ಮನುಷ್ಯನ ಜೀವನವೂ ಅಷ್ಟೆ ಬಾಹ್ಯಾಡಂಬರಕ್ಕಿಂತ ನಮ್ಮೊಳಗಿರುವ ಪ್ರೀತಿ, ಸೌಜನ್ಯ, ಮೌನ ಇಂತಹ ಗುಣಗಳು ಎಲ್ಲರನ್ನೂ ಸೆಳೆಯಲು ಸಹಕಾರಿಯಾಗುತ್ತದೆ. 

*ಪೆನ್ಸಿಲನ್ನು ಬಳಸುವಾಗ ಅದನ್ನು ಉಪಯೋಗಿಸುವ ವ್ಯಕ್ತಿ ತಪ್ಪು ಮಾಡಬಹುದು, ಅದರೆ ಪೆನ್ಸಿಲಿನಿಂದ ಬರೆದ ಬರಹವನ್ನು ತಿದ್ದಿ ಬರೆಯಲು ಸಾಧ್ಯವಿದೆ. ಮನುಷ್ಯರೆಂದ ಮೇಲೆ ತಪ್ಪು ಮಾಡುವುದು ಸಹಜ. ಆ ತಪ್ಪುಗಳನ್ನು ತಿದ್ದಿಕೊಂಡು,ಪುನಃ ಬದಕನ್ನು ರೂಪಿಸಿ ಕೊಳ್ಳಲು ಸಾಧ್ಯವಿದೆ. ಅದಕ್ಕೆ ನಮ್ಮೊಳಗಿನ 'ಆಹಂ'ತೊರೆಯಬೇಕು. 

* ಪೆನ್ಸಿಲಿನಿಂದ ಬರೆದ ಬರಹ ಎಲ್ಲಿಗೆ ಹೋಗಲಿ, ಹೇಗೆ ಇರಲಿ ಅದಕ್ಕೊಂದು ವಿಶಿಷ್ಟವಾದ ಗುರುತನ್ನು ಮೂಡಿಸುವ ಶಕ್ತಿಯಿದೆ. ಪೆನ್ಸಿಲಿನಂತೆ ನಾವು ಸಹ ಎಲ್ಲಿಯೇ ಹೋದರೂ ನಮ್ಮಲ್ಲಿರುವ ಸೌಜನ್ಯದ ಕುರುಹುಗಳನ್ನು ಮೂಡಿಸಬೇಕು. ಆಗಲೇ ನಾವು ಎಲ್ಲರೊಂದಿಗೆ ಹೊಂದಿ ನಡೆಯಲು ಸಾಧ್ಯ. 

      ಜೀವನದಲ್ಲಿ ಪೆನ್ಸಿಲಿನಂತೆ ಇರೋಣ. ನಮ್ಮೊಂದಿಗೆ ಸ್ನೇಹ-ಸಂಬಂಧಗಳನ್ನು ಕೋರಿ ಬರುವವರಿಗೆ  ಇರುವ ಚಿಕ್ಕ ಜೀವನವನ್ನು ಅವರೊಂದಿಗೆ ಸುಂದರವಾಗಿ ಕಳೆಯೋಣ.ಈ ಅದ್ಭುತವಾದ ಜೀವನದಲ್ಲಿ ಭಿನ್ನಾಭಿಪ್ರಾಯದಿಂದ ದೂರ ಇರೋಣ. 


ಸುದ್ದಿ ಓದಿ