ಚೀನಾಗೆ ಭಾರತ ತಿರುಗೇಟು
ನವದೆಹಲಿ/ಬೀಜಿಂಗ್, ಏ.8- ಕುಪ್ರಸಿದ್ಧ ಭಯೋತ್ಪಾದಕ ಮತ್ತು ಜೈಷ್-ಎ-ಮಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನ ಪಟ್ಟಿಗೆ ಸೇರಿಸಬೇಕೆಂಬ ತನ್ನ ಪ್ರಸ್ತಾವನೆಗೆ ಅಡ್ಡಗಾಲು ಹಾಕುತ್ತಿರುವ ಚೀನಾಗೆ ಭಾರತ ತಿರುಗೇಟು ನೀಡಿದೆ.
ಬೀಜಿಂಗ್ನಲ್ಲಿ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ದ್ವಿತೀಯ ಬಿಆರ್ಐ (ಬೆಲ್ಟ್ ಅಂಡ್ ರೋಡ್ ಫೋರಂ) ಸಭೆಯಲ್ಲಿ ಭಾಗವಹಿಸುವಂತೆ ಕೋರಿ ಚೀನಾ ನೀಡಿದ ಆಮಂತ್ರಣವನ್ನು ಭಾರತ ಎರಡನೇ ಬಾರಿ ತಿರಸ್ಕರಿಸಿದೆ.
2017ರಲ್ಲಿ ನಡೆದ ಬಿಆರ್ಐ ವೇದಿಕೆ ಸಭೆಯನ್ನೂ ಸಹ ಭಾರತ ಬಹಿಷ್ಕರಿಸಿತ್ತು.
ಚೀನಾ-ಪಾಕಿಸ್ತಾನ ಆರ್ಥಿಕ ರಾಜಪಥ(ಸಿಪಿಇಸಿ)ವು ವಿವಾದಿತ ಗಿಲ್ಗಿಟೆ-ಬಲಿಸ್ಟಾನ್ ಪ್ರಾಂತ್ಯದ ಮೂಲಕ ಹಾದು ಹೋಗುತ್ತದೆ. ಈ ಯೋಜನೆ ಮೂಲಕ ಈ ಎರಡೂ ರಾಷ್ಟ್ರಗಳು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿ ಸಭೆಯಿಂದ ನವದೆಹಲಿ ದೂರ ಉಳಿದಿತ್ತು. ಎರಡು ವರ್ಷಗಳ ಬಳಿಕ ಚೀನಾ ನೀಡಿರುವ ಸಭೆಯ ಆಮಂತ್ರಣವನ್ನು ಭಾರತ ಮತ್ತೊಮ್ಮೆ ನಿರಾಕರಿಸಿ ಬೀಜಿಂಗ್ಗೆ ತಿರುಗೇಟು ನೀಡಿದೆ.
ಈ ಸಭೆಯಲ್ಲಿ ಭಾರತ ಪಾಲ್ಗೊಂಡು ತನ್ನ ಯೋಜನೆಗಳ ಬಗ್ಗೆ ಅಭಿಪ್ರಾಯ ಪಡೆಯಬೇಕೆಂಬುದು ಚೀನಾದ ಉದ್ದೇಶವಾಗಿತ್ತು. ಈಗ ಎರಡನೇ ಭಾರಿ ಬೀಜಿಂಗ್ ಆಹ್ವಾನವನ್ನು ನವದೆಹಲಿ ತಿರಸ್ಕರಿಸಿದ್ದು ಚೀನಾ ಮತ್ತು ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ.