ಸಂವಿಧಾನ ಓದಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಉಳಿಯುತ್ತದೆ
ಲೋಕದರ್ಶನ ವರದಿ
ಸಿಂದಗಿ 16: ನಗರದ ಡಾ. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ವಿದ್ಯಾರ್ಥಿಗಳು ಸಂವಿಧಾನವನ್ನು ಓದಿ ಅರಿತುಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಸಾಧ್ಯ ಎಂದು ಹೇಳಿದರು.
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಅಲ್ಲ. ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಪ್ರಜಾಪ್ರಭುತ್ವವನ್ನು ರಕ್ಷಿಸುವ ಕಾರ್ಯದಲ್ಲಿ ಭಾಗಿಯಾಗಬೇಕು. ಧರ್ಮ, ಶ್ರೀಮಂತಿಕೆ ಹಾಗೂ ತಂತ್ರಜ್ಞಾನದ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ ಗುಂದಗಿ ಮಾತನಾಡಿ, ಭಾರತ ಸಂವಿಧಾನ ಪರಿಚಯಿಸುವ ಕಾರ್ಯಕ್ರಮದ ಮೂಲಕ ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡಿರುವುದೇ ಪ್ರಜಾಪ್ರಭುತ್ವದ ಪ್ರಮುಖ ಅಡಿಪಾಯ. ಸಂವಿಧಾನವನ್ನು ಅರಿತುಕೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಮೂಲ ಸಂಸತ್ ಪರಿಚಯಿಸುವ ಕಾರ್ಯಕ್ರಮದ ಅಂಗವಾಗಿ ತಾಲೂಕಿನಲ್ಲಿ ರಾಜ್ಯದ 224 ಮತಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಜಿಲ್ಲೆಯ 13 ತಾಲೂಕುಗಳ ಕ್ಷೇತ್ರಗಳ ವಿವರಗಳನ್ನು ಒಳಗೊಂಡ ಯುವ ಸಂಸತ್ ರಚಿಸಿ ಮಾಹಿತಿ ನೀಡುವ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವಿದ್ಯಾರ್ಥಿಗಳು ಸಂವಿಧಾನ ಓದುವ ಮೂಲಕ ವಿಧಾನಸಭೆಯಲ್ಲಿ ನಡೆಯುವ ಕಾರ್ಯಕಲಾಪಗಳ ಪರಿಚಯ ಪಡೆಯಬೇಕು ಎಂದು ಕರೆ ನೀಡಿದರು.
ಶಿಕ್ಷಣ ಸಂಯೋಜಕ ಬಿ.ಡಿ. ಪಾಟೀಲ ಸ್ವಾಗತಿಸಿದರು. ಗ್ರೇಡ್-2 ತಹಶೀಲ್ದಾರ್ ಎಂ.ಜಿ. ಬಿರಾದಾರ ಸಂವಿಧಾನ ಪೀಠಿಕೆ ಓದಿದರು. ಬಾಗೇಶ ಗೋಲಗೇರಿ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ವಂದಿಸಿದರು.