ಮೌಲ್ಯಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ: ಛಲವಾದಿ
ಯಲಬುರ್ಗಾ 20: ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಉತ್ತಮ ಸಮಾಜ ರೂಪುಗೊಲ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ಉತ್ತಮ ಚಿಂತನೆಯನ್ನು ಹೊಂದಿರಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ, ಸ್ನಾತಕೋತ್ತರ ಕೇಂದ್ರದ ಯಲಬುರ್ಗಾ ವಾಣಿಜ್ಯ ಸಹಾಯಕ ಪ್ರಾಧ್ಯಾಪಕ ಡಾ. ಸಿ.ಹಾಯ್.ಛಲವಾದಿ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನೆಡೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪದವಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮನುಕುಲದ ರಕ್ಷಣೆಯತ್ತ ಮುಖ ಮಾಡಬೇಕು. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಏರುಪೇರನ್ನು ಗಮನಿಸಿ, ಅದಕ್ಕೆ ಸೂಕ್ತವಾದ ಪರಿಹಾರ ಕಂಡು ಕೊಳ್ಳಬೇಕು. ಮಾನವನು ತನ್ನ ವಿಪರೀತ ಆಸೆ ಆಕಾಂಕ್ಷಿಗಳನ್ನು ಪೂರೈಸುವ ನಿಟ್ಟಿನಲ್ಲಿ ಪರಿಸರವು ಅಸಮತೋಲಕ್ಕೆ ಒಳಗಾಗುತ್ತದೆ. ಪ್ರಜ್ಞಾವಂತ ನಾಗರಿಕರಾದ ನಾವು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಶಿವರಾಜ ಗುರಿಕಾರ ಕಾರ್ಯಕ್ರಮದ ಅಧ್ಯಕ್ಷತೆ ವಯಿಸಿ ಮಾತನಾಡಿದರು, ವಿದ್ಯೆಯಿಂದ ವಿನಯವಂತರಾಗಬೇಕು. ಗೌರಯುತವಾಗಿ ಬದುಕಿ, ಸೌಹಾರ್ದ ಯುತವಾಗಿ ಸಮಾಜದಲ್ಲಿ ಬದುಕಬೇಕು. ವಿದ್ಯೆ ಪಡೆಯುವ ಮೂಲ ಉದ್ದೇಶ ಪರಿಪೂರ್ಣತೆಯೆಡೆಗೆ ಸಾಗುವುದಾಗಿರಬೇಕು ಎಂದರು. ಕಾಲೇಜಿನ ನೀತಿ ನಿಯಮಗಳ ಕುರಿತು ಅವರು ಮಾಹಿತಿ ನೀಡಿದರು.
ಬಿಕಾಂ, ಪದವಿ ತರಗತಿಗಳಿಗೆ ದಾಖಲಾದ ವಿದ್ಯಾರ್ಥಿಗಳನ್ನು ಸಾಂಕೇತಿಕವಾಗಿ ಹೂಗುಚ್ಚು ನೀಡಿ ಸ್ವಾಗತಿಸಲಾಯಿತು. ಉಪನ್ಯಾಕ ವೀರೇಶ ಗಜೇಂದ್ರಗಡ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪನ್ಯಾಸಕ ವಾಯ್.ಬಿ.ಅಂಗಡಿ, ಎ.ಬಿ.ಕೆಂಚರೆಡ್ಡಿ, ಎಚ್.ಎಮ್.ಗುಡಿಹಿಂದಲ್, ವಿನೋದ್ ಸಿದ್ದಣ್ಣವರ, ಗವಿಸಿದ್ದಯ್ಯ ಹಿರೇಮಠ, ರಮೇಶ ಗುಜ್ಜರ್, ಮಂಜುಳಾ ಮಡಿವಾಳರ್, ಸಿಬ್ಬಂದಿ ಶಿವಲೀಲಾ ಯಾವಗಲ್ಲಮಠ, ರುದ್ರಮಣಿ ಎಕ್ಲಾಸ್ಪೂರ, ಕಲ್ಲಪ್ಪ ಹಿರೇಕುರುಬರ್, ಭೂಮೇಶ ಗದ್ದಿ, ಸೇರಿ ಮತ್ತಿತರರು ಇದ್ದರು.