ಕಥೆ ಮತ್ತು ವಿಶೇಷ ಲೇಖನಗಳು

ಮೇಷ್ಟ್ರು ಎಂದೊಡನೆ ಕಪ್ಪು ಕೋಟು, ಬಿಳಿ ಧೋತಿ ಮತ್ತು ಕೈಯಲ್ಲಿನ ಪುಸ್ತಕಗಳು ನೆನಪಾಗುತ್ತವೆ

ಮೇಷ್ಟ್ರು ಎಂದೊಡನೆ ಕಪ್ಪು ಕೋಟು, ಬಿಳಿ ಧೋತಿ ಮತ್ತು ಕೈಯಲ್ಲಿನ ಪುಸ್ತಕಗಳು ನೆನಪಾಗುತ್ತವೆ

- ಪ್ರವೀಣ ಗಿರಿ, ಚ.ಕಿತ್ತೂರ

ಅದೊಂದು ಕಾಲವಿತ್ತು.

ಹೆಚ್ಚಾಗಿ ಕಪ್ಪು ಬಣ್ಣದ ಕೋಟು, ಬಿಳಿ ಧೋತಿ, ತಲೆಗೆ ಹೊಂದಿಕೊಳ್ಳುವ ಒಂದು ಟೊಪ್ಪಿಗೆ, ಕೈಯಲ್ಲಿ ಒಂದೆರಡು ಪುಸ್ತಕಗಳನ್ನು ಹಿಡಿದು ದಾರಿಯುದ್ದಕ್ಕೂ ತಮ್ಮದೇ ಆದ ಗಾಂಭೀರ್ಯ ನಡಿಗೆಯಲ್ಲಿ ಹೆಜ್ಜೆ ಹಾಕುತ್ತ ಸಾಗಿದರೇ ಮುಗಿಯಿತು. ಗ್ರಾಮದ ಪಂಚರೂ ಸೇರಿದಂತೆ ಇಡೀ ಗ್ರಾಮಸ್ಥರು ಶೃದ್ಧೆ, ಭಕ್ತಿ, ನಮ್ರತೆ ಮತ್ತು ವಿನಯದಿಂದಲೇ ನಮಸ್ಕರಿಸುತ್ತಿದ್ದರು. ಇದು ಆ ಶಿಕ್ಷಕ ಹುದ್ದೆಗೆ ಮತ್ತು ವ್ಯಕ್ತಿಗಿರುವ ಗೌರವವಾಗಿತ್ತು.  

ಶಾಲಾ ಮಕ್ಕಳಂತೂ ಗುರುಗಳ ಬರುವಿಕೆಯನ್ನು ನೋಡುತ್ತಿದ್ದಂತೆಯೇ ಕಾಲಿಗೆ ಬುದ್ಧಿ ಹೇಳಿ ಓಡಲು ಶುರುವಿಟ್ಟುಕೊಳ್ಳುತ್ತಿದ್ದರು. ಇಲ್ಲವೇ ಗುರುವಿನ ಕಣ್ಣು ತಪ್ಪಿಸಲು ಸಿಕ್ಕ-ಸಿಕ್ಕ ಪೊದೆ, ಗೋಡೆಯ ಹಿಂಬದಿ ಅವಿತು ಕುಳಿತುಕೊಳ್ಳುತ್ತಿದ್ದರು. ಇದು ಗುರುಗಳ ಮೇಲಿನ ಭಯ ಅಥವಾ ಭಕ್ತಿಯನ್ನು ತೋರಿಸುತ್ತಿತ್ತು. ಅಂದಿನ ದಿನಗಳಲ್ಲಿ ಗುರುಗಳ ಕುರಿತು ಅಷ್ಟೊಂದು ಧನ್ಯತೆಯ ಭಾವ ಮನೆ ಮಾಡಿತ್ತು. ಅಂದಿನ ದಿನಗಳು ಅಷ್ಟೇ ಸಂತೋಷ ಮತ್ತು ನೆಮ್ಮದಿಯಿಂದ ಕೂಡಿದ್ದವು. ಈಗಿನಂತೆ ಎಲ್ಲವೂ ಇದ್ದು, ಏನೂ ಇಲ್ಲ ಎಂಬ ಭಾವನೆ ನಮ್ಮನ್ನು ಕಾಡುತ್ತಿರಲಿಲ್ಲ...

ಹೀಗೆ ಆ ಕಾಲದ ಗುರುಗಳ ಕುರಿತು ಚಿಕ್ಕವನಿದ್ದಾಗಲೇ ನನ್ನ ಅಜ್ಜ ಅಷ್ಟಿಷ್ಟೂ ಹೇಳಿದ ಮಾತುಗಳು ಇಂದು ನನಗೆ ನೆನಪಾಯಿತು. ನನ್ನಜ್ಜನೂ (ತಾಯಿಯ ತಂದೆ) ಕೂಡ ಆ ಕಾಲದ ಕಪ್ಪು ಕೋಟು ಮತ್ತು ಬಿಳಿ ಧೋತಿಯನ್ನು ಉಡುತ್ತಿದ್ದ ಮೇಷ್ಟ್ರು ಎಂಬುದು ಹೆಮ್ಮೆ ಎನಗೆ.

ಆದರೆ ಅಂದಿನ ಮತ್ತು ಇಂದಿನ ಶಿಕ್ಷಣ ಪದ್ಧತಿ, ಶಿಕ್ಷಕ ವೃತ್ತಿಗೆ ಅಜಗಜಾಂತರ ವ್ಯತ್ಯಾಸವಿದೆ. ಬದಲಾವಣೆ ಜಗದ ನಿಯಮ ಎಂಬಂತೆ ಶಿಕ್ಷಣ ಕ್ಷೇತ್ರವೂ ಸೇರಿದಂತೆ ಬಹುತೇಕ ಕ್ಷೇತ್ರಗಳಿಂದು ಸಾಕಷ್ಟು ಪ್ರಮಾಣದಲ್ಲಿ ಬದಲಾಗಿವೆ ಮತ್ತು ಅಭಿವೃದ್ಧಿಯನ್ನು ಹೊಂದಿವೆ. ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಅಪಡೆಟ್ ಆಗುತ್ತಿವೆ ಎನ್ನಬಹುದು. ದೇಶದ ಇತಿಹಾಸವನ್ನೊಮ್ಮೆ ಮೆಲುಕು ಹಾಕಿದಾಗ ನಮ್ಮದು ಗುರು ಪರಂಪರೆ. ಪ್ರಾಚೀನ ಕಾಲದಲ್ಲಿ ಗಿಡ-ಮರಗಳ ಕೆಳಗೆ ಕುಳಿತು ಅಕ್ಷರಭ್ಯಾಸ ಮಾಡಿಸುತ್ತಿದ್ದರು ಎಂಬುದನ್ನು ನಾವು ಹತ್ತು ಹಲವು ಕಥೆ, ಪುರಾಣಗಳಲ್ಲಿ ಕೇಳಿದ್ದೇವೆ. 

ಆದರೆ ಇಂದು ಎಲ್ಲವೂ ಬದಲಾವಣೆಯಾಗಿದೆ. ಚಂದ್ರನ ಮೇಲೆ ಕಾಲಿಟ್ಟು, ಅಂಗೈಯಲ್ಲಿಯೇ ಜಗತ್ತನ್ನು ನೋಡುವ ಸ್ಥಿತಿಗೆ ಬಂದು ನಿಂತಿದ್ದೇವೆ. ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಮೂಲಕ ಶಿಕ್ಷಣವನ್ನು ನೀಡುವ ಪ್ರಕ್ರಿಯೆಯೂ ಆರಂಭವಾಗಿದೆ. ಮನುಷ್ಯನಿಂದು ಇಷ್ಟೊಂದು ಬೆಳೆಯಲು ಮುಖ್ಯ ಕಾರಣವೇ ಶಿಕ್ಷಣ ಮತ್ತು ಶಿಕ್ಷಕರು ಎಂಬುದು ಹೆಮ್ಮೆ. 

ನಮ್ಮ ಸಂಸ್ಕೃತಿಯಲ್ಲಿ ತಂದೆ, ತಾಯಿ ಮತ್ತು ಗುರುವಿಗೆ ವಿಶೇಷವಾದ ಸ್ಥಾನವಿದೆ. ಆದರೆ ಇಂದಿನ ಪಿಳೀಗೆ ಇವೆಲ್ಲವನ್ನೂ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ಬೇರೆ ದಾರಿ ಹಿಡಿಯುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹಿರಿಯರಿಗೆ ಮತ್ತು ಗುರುಗಳಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆ ಎಂಬುದು ಖೇದಕರ. ಇದು ಸಮಾಜವನ್ನು ಅವನತಿಯತ್ತ ಕರೆದುಕೊಂಡು ಹೋಗುವ ಮುನ್ಸೂಚನೆ ಮತ್ತು ನಮ್ಮ ದೇಶದ ದುರಂತವೆನ್ನಬಹುದು. ತಮ್ಮ ಸ್ವಾರ್ಥ ಬದಿಗಿಟ್ಟು ಉತ್ತಮ ಸಮಾಜ ನಿಮರ್ಾಣಕ್ಕಾಗಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಥರ್ಿಯನ್ನು ತಿದ್ದಿ ತೀಡಿ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವ ಶಿಕ್ಷಕರನ್ನು ರಾಷ್ಟ್ರ ರಕ್ಷಕರು ಎನ್ನುವುದು ಇದೇ ಕಾರಣಕ್ಕೆ. ಆದುದರಿಂದಲೇ ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಎಂದು ದಾಸ ಶ್ರೇಷ್ಠರು ಸುಮ್ಮನೇ ಹೇಳಿಲ್ಲ. 

ಸಾಕಷ್ಟು ವರ್ಷಗಳು ಉರುಳಿದರೂ ಶಿಕ್ಷಕ ಎಂದೊಡನೆ ತಟ್ಟನೇ ನೆನಪಾಗುವ ಅಗ್ರ ಗಣ್ಯ ಹೆಸರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಇಂದಿಗೂ ಅವರ ಜನ್ಮ ದಿನವನ್ನು ನಾವೆಲ್ಲರೂ ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಕರ ಮಹತ್ವವನ್ನು ಇಡೀ ದೇಶಕ್ಕೆ ಪಸರಿಸಿದ ಇಂತಹ ಮಹಾನ್ ವ್ಯಕ್ತಿಯ ಕುರಿತು ಇಂದಿನ ಪಿಳೀಗೆ ತಿಳಿದುಕೊಳ್ಳಲಿ ಎಂಬ ಸಣ್ಣ ಪ್ರಯತ್ನ ಇಲ್ಲಿದೆ.  

ಡಾ.ಸರ್ವಪಲ್ಲಿ ರಾಧಾಕೃಷ್ಣನ್ 

ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತ ಬಂದಿದ್ದೇವೆ. ಒಬ್ಬ ಶಿಕ್ಷಕ ಮನಸ್ಸು ಮಾಡಿದರೇ ದೇಶದ ಚುಕ್ಕಾಣಿಯನ್ನು ಹಿಡಿದು ಸಮರ್ಥವಾಗಿ ಮುನ್ನಡೆಸಬಹುದು ಎಂಬುದನ್ನು 1962 ರಲ್ಲಿಯೇ ರಾಧಾಕೃಷ್ಣನ್ ದೇಶಕ್ಕೆ ತೋರಿಸಿ ಕೊಟ್ಟಿದ್ದಾರೆ. ಕಿತ್ತು ತಿನ್ನುವ ಕಡು ಬಡತನದ ಪರಿಸ್ಥಿತಿಯಲ್ಲಿ ಸ್ಕಾಲರ್ ಶಿಫ್ ಹಣದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಾಲೆಯ ಶಿಕ್ಷಣವನ್ನು ಮುಗಿಸಿದ ಅವರು, ಮದ್ರಾಸ್ (ಇಂದಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದ ಮೇಲೆ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದರು. 

ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಅವರು ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನು ಬದಲಿಸಿತು. ಭಾರತದ ಸನಾತನ ಧರ್ಮವಾದ ಹಿಂದೂ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ, ಪ್ಲೇಟೋ ಮುಂತಾದ ಮಹಾನ್ ವ್ಯಕ್ತಿಗಳ ಕುರಿತು ಅಧ್ಯಯನ ಕೈಗೊಂಡರು. ತಮ್ಮ ಆಳವಾದ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೆರುತ್ತಾ ಸಾಗಿದರು. 

1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ದೇಶ-ವಿದೇಶಗಳ ವಿವಿಧ ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ತಮ್ಮ ಆಳವಾದ ಮತ್ತು ಹರಿತವಾದ ವಿಚಾರಗಳನ್ನು ಮಂಡಿಸುತ್ತ ಸಾಗಿದ ಅವರು, ಪ್ರಥಮವಾಗಿ 'ದಿ ಫಿಲಾಸಪಿ ಆಫ್ ರವೀಂದ್ರನಾಥ್ ಟ್ಯಾಗೋರ್ ಎಂಬ ಪುಸ್ತಕವನ್ನು ಹೊರತಂದರು. ರಾಧಾಕೃಷ್ಣನ್ ಅವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್ಫಡರ್್ ವಿಶ್ವವಿದ್ಯಾಲಯ ಧರ್ಮ ಮತ್ತು ನೀತಿಶಾಸ್ತ್ರ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿದ್ದು ಅವರ ಜ್ಞಾನ ಭಂಡಾರಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.  

1931ರಲ್ಲಿ ಆಂಧ್ರ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಅವರು, ತಮ್ಮ ಅವಧಿಯಲ್ಲಿ ಹತ್ತು ಹಲವು ಸುಧಾರಣೆಗಳನ್ನು ತಂದರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. 

1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಉತ್ತಮ ಸೇವೆ ಸಲ್ಲಿಸಿದರು. ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. 1948ರಲ್ಲಿ ಸರಕಾರ ರಾಧಾಕೃಷ್ಣನ್ ಅವರನ್ನು ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾ ದೇಶಕ್ಕೆ ಭಾರತ ದೇಶದ ರಾಯಭಾರಿಯಾಗಿ ನೇಮಿಸಿತು. ಡಾ. ರಾಧಾಕೃಷ್ಣನ್ ಸ್ಟಾಲಿನ್ ಅವರಂತಹ ಮೇಧಾವಿಗಳ ಸರಿಸಮಾನವಾಗಿ ನಿಲ್ಲುವ ವ್ಯಕ್ತಿತ್ವವನ್ನು ಹೊಂದಿದ್ದರು.

ಉಪ ರಾಷ್ಟ್ರಪತಿಯಾಗಿ ನೇಮಕಗೊಂಡ ರಾಧಾಕೃಷ್ಣನ್ ರಾಜ್ಯ ಸಭೆಯಲ್ಲಿ ತಮ್ಮ ಸಂಸ್ಕೃತ ಶ್ಲೋಕಗಳ ಮೂಲಕ ಇತರರ ಗಮನ ಸೆಳೆಯುತ್ತಿದ್ದರು. ಡಾ.ರಾಜೇಂದ್ರ ಪ್ರಸಾದ್ ಅವರ ನಂತರ ದೇಶದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ತಮ್ಮ ಅಧಿಕಾರವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಶ್ರಮಿಸಿದರು. ಮದ್ರಾಸ್ಸಿನ ಮೈಲಾಪೂರದಲ್ಲಿರುವ ತಮ್ಮ ಅಧಿಕೃತ ನಿವಾಸ ಗಿರಿಜಾದಲ್ಲಿ 1975 ರಂದು ಮರಣ ಹೊಂದಿದರು.

ಡಾ. ರಾಧಾಕೃಷ್ಣನ್ ಅವರು ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ, ತತ್ವಜ್ಞಾನ ಮತ್ತು ದೇಶದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಇಂತಹ ಮಹಾನ್ ವ್ಯಕ್ತಿಯ ಜೀವನ ಎಂದಿಗೂ ಈ ಸಮಾಜಕ್ಕೆ ಮಾದರಿ. 

 

ಸುದ್ದಿ ಓದಿ