ಕುಕನೂರ್

12ನೇ ಶತಮಾತನಾದ ನೇರ ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ

12ನೇ ಶತಮಾತನಾದ ನೇರ ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ

ಲೋಕದರ್ಶನ ವರದಿ

ಕುಕನೂರ 09: ಅಂಬಿಗರ ಚೌಡಯ್ಯ ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾನೆ ಎಂದು ಗಂಗಮತ ಸಮಾಜದ ಮುಂಖಡ ವೀರಣ್ಣ ಬಾರಕೇರ ಹೇಳಿದರು.    

    ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಅಂಬಿಗರ ಚೌಡಯ್ಯ ವಿಚಾರಗೋಷ್ಟಿ ಮತ್ತು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಅಂಬಿಗರ ಚೌಡಯ್ಯನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು. ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬರು ಸಿಡಿಲು ನುಡಿಯ ಸರ್ವಜ್ಞ ಇನ್ನೊಬ್ಬ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ ಎಂದು ಹೇಳಿದರು.

       ಹಿರಿಯ ಪತ್ರಕರ್ತ ಬಸವರಾಜ ಕೋನಾರಿ ಮಾತನಾಡಿ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಠೂರ ಮನುಷ್ಯ ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕ  ಎಂದರು.

     ಈ ಸಂದರ್ಭದಲ್ಲಿ ಶ್ರೀಮಠದ ಪೂಜ್ಯ ಮಹಾದೇವ ದೇವರು ಗಂಗಮತ ಸಮಾಜದ ಹಿರಿಯರನ್ನ ಸನ್ಮಾನಿಸಿದರು. ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ, ಕಾಶೀಂ ಸಾಬ ಸಂಗಟಿ, ಬಾಳಪ್ಪ ಬಾರಕೇರ, ಪ್ರಭು ಶಿವಶಿಂಪರ, ಶಿವಪುತ್ರಪ್ಪ ಮಡ್ಡಿ, ಯಮನೂರಪ್ಪ ಅಂಬಿಗರ, ಶಂಕರಗೌಡ್ರ ಗೌಡರ, ಮಜುಂನಾಥ ಮುಂಡರಗಿ, ಬೀಮಪ್ಪ ಬಾರಕೇರ, ಗುದ್ನಪ್ಪ ಬಾರಕೇರ, ಶಿವುಕುಮಾರ ಬುದಗುಂಪಿ ಮತ್ತು ಇತರರು ಇದ್ದರು 

ಸುದ್ದಿ ಓದಿ