'ಸದ್ದಿಲ್ಲದೇ ಸಮಾಜ ಸೇವೆ ಮಾಡಿ ಸದ್ದು ಮಾಡಿದ್ದು ಶಿವಾಜಿ ಕಾಗಣೀಕರ
- ಪ್ರವೀಣ ಗಿರಿ, ಚ. ಕಿತ್ತೂರ
ಅಂದು ಮನಸ್ಸು ಮಾಡಿದ್ದರೇ ಬಿಎಸ್ಸಿ ಪದವಿ ಪೂರ್ಣಗೊಳಿಸಿ, ಇಂದು ಕೈ ತುಂಬ ಸಂಬಳ ಏಣಿಸುತ್ತ ಬಿಂದಾಸ್ ಆಗಿ ತಮ್ಮದೇ ಶೈಲಿಯಲ್ಲಿ ಜೀವನ ನಡೆಸಬಹುದಿತ್ತು. ಆದರೆ ಆ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಸಮಾಜದ ಬಗೆಗಿರುವ ತುಡಿತ, ಪರಿಸರ ಬಗೆಗಿರುವ ಕಾಳಜಿ ಅವರನ್ನು ಬೇರೆಯೇ ಮಾರ್ಗದಲ್ಲಿ ಹೆಜ್ಜೆ ಇರಿಸುವಂತೆ ಮಾಡಿತು.
ಪರಿಣಾಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೊಡ ಮಾಡುವ 2018-19ನೇ ಸಾಲಿನ ದಿ. ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಈ ಮಹಾನ್ ವ್ಯಕ್ತಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇವರ ಸಾಧನೆ ಕಂಡು ಬೆರಗಾಗಿದ್ದಾರೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೇ ಏನೆಲ್ಲ ಬದಲಾವಣೆ, ಮತ್ತು ಸುಧಾರಣೆ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ ಎನ್ನಬಹುದು.
ಖಾದಿ ಅಂಗಿ, ಖಾಕಿ ಚಡ್ಡಿ, ತಲೆಗೊಂದು ಬಿಳಿ ಬಣ್ಣದ ಗಾಂಧೀ ಟೊಪ್ಪಿಗೆ, ಕುರುಚಲು ಗಡ್ಡ ಹೊಂದಿರುವ, ಸದಾ ಬಗಲಲ್ಲೊಂದು ಕೈಚೀಲ ಹಾಕಿಕೊಂಡು ಸೈಕಲ್ ಏರಿ ಹಳ್ಳಿ ಹಳ್ಳಿಗಳನ್ನು ಸಂಚರಿಸುತ್ತ, ಹಸಿರು ಪರಿಸರ ನಿಮರ್ಾಣಕ್ಕೆ ಪಣ ತೊಟ್ಟಿರುವ, ನೋಡಲು ಪಕ್ಕಾ ಅನಕ್ಷರಸ್ಥರಂತೆ ಕಂಡುಬರುವ ಈ ಮಹಾನುಭಾವ ಮತ್ತಾರಲ್ಲ, ಬೆಳಗಾವಿಯ ಶಿವಾಜಿ ಛತ್ರೆಪ್ಪ ಕಾಗಣೀಕರ.
ಬೆಳಗಾವಿ ಜಿಲ್ಲಾ ಕೇಂದ್ರದಿಂದ ಸುಮಾರು 22 ಕಿ.ಮೀ. ದೂರದಲ್ಲಿರುವ ಕಟ್ಟಣಬಾವಿ ಗ್ರಾಮದ ನಿವಾಸಿ. ಒಂದು ಕಾಲದಲ್ಲಿ ಶಿವಾಜಿ ಮಾಡುವ ಈ ಕೆಲಸ ಕಾರ್ಯಗಳನ್ನು ಕಂಡ ಕೆಲವರು ಅಸೂಯೆ ಪಟ್ಟುಕೊಳ್ಳುತ್ತಿದ್ದರು. ಅಂದು ತನ್ನ ಊರನ್ನು ತೊರೆದು ಹಳ್ಳಿ ಹಳ್ಳಿಗಳನ್ನು ಸಂಚರಿಸುತ್ತ ಸಾಗಿರುವ ಶಿವಾಜಿ ಅವರದ್ದು ಸಂಚಾರಿ ಜೀವನ ಎನ್ನಬಹುದು. ಈಗಲೂ ಸ್ವಂತ ಸೂರಿಲ್ಲದೇ ತನ್ನ ಬದುಕಿನ ಬಂಡಿಯನ್ನು ನೂಕುತ್ತಿರುವ ಶಿವಾಜಿ ಅವರಿಗೆ ಈಗ 70 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿಯೂ ಪರಿಸರ ಜಾಗೃತಿ ಕಾರ್ಯವನ್ನು ಮಾಡಿ ಊರಿಗೆ ಕೀತರ್ಿ ತಂದಿದ್ದಾರೆ. ಇವರ ಕೆಲಸ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ಈ ವಯಸ್ಸಿನಲ್ಲಿ ಇರುವ ಮಾಡುವ ಕಾರ್ಯ ಮುಖ್ಯವಾಗಿ ಯುವಕರನ್ನು ನಾಚಿಸುವ ಸಂಗತಿ.
ಆಗಿನ್ನೂ ಶಿವಾಜಿ ಅವರಿಗೆ 19 ವರ್ಷ. ತನ್ನ ಗೆಳೆಯರೊಂದಿಗೆ ಸೇರಿ ಆಟ ಆಡುವ ಹುಂಬ ವಯಸ್ಸು. ಸರಿಯಾಗಿ ಇನ್ನೂ ಮುಖದ ಮೀಸೆ ಮೂಡಿರಲಿಲ್ಲ ಆದರೂ ಸಮಾಜಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕು ಎನ್ನುವ ಹಂಬಲ. ಪರಿಣಾಮ ಇದರ ಮೊದಲ ಹೆಜ್ಜೆ ಎಂಬಂತೆ ರಾತ್ರಿ ವೇಳೆಯಲ್ಲಿ ನಡೆಯುವ ಶಿಕ್ಷಣ ಕಲಿಕಾ ತರಬೇತಿ ಕೇಂದ್ರಗಳಲ್ಲಿ ಅಕ್ಷರ ಅಭ್ಯಾಸವನ್ನು ಹೇಳಿಕೊಡುವ ಮೂಲಕ ಸಾಮಾಜಿಕ ಸೇವೆಗೆ ಇಳಿದರು. ಅಕ್ಷರಗಳು ಗೊತ್ತಿರದ ಅದೆಷ್ಟೋ ಹಳ್ಳಿಯ ಮುಗ್ಧ ಜನರಿಗೆ ಅಕ್ಷರಗಳನ್ನು ಹೇಳಿಕೊಟ್ಟು ಅವರ ಶೈಕ್ಷಣಿಕ ಏಳಿಗೆಗೆ ಕಾರಣರಾಗಿದ್ದಾರೆ.
ಪರಿಸರದ ಕುರಿತು ವಿಶೇಷ ಕಾಳಜಿವಿರುವ ಶಿವಾಜಿ, ತನ್ನ ಸುತ್ತಲಿನ ಪರಿಸರ ಹಸಿರಾಗಿ ಇರಬೇಕೆಂಬ ಒಂದೇ ಉದ್ದೇಶದಿಂದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟು ಸೈ ಎನಿಸಿಕೊಂಡಿದ್ದಾರೆ. ಇದಕ್ಕೆ ಅವರ ಗ್ರಾಮಸ್ಥರು ಸೇರಿದಂತೆ ಹತ್ತು ಹಲವರು ಕೈ ಜೋಡಿಸಿದ್ದಾರೆ. ಪರಿಸರ ಹಾಳು ಮಾಡುವ ಇಂದಿನ ದಿನಗಳಲ್ಲಿ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಪ್ರತಿಯೊಬ್ಬರೂ ಶಿವಾಜಿ ಅವರ ಈ ಕಾರ್ಯವನ್ನೂ ಅನುಸರಿಸಬೇಕಾಗಿದೆ.
ಕಾಖರ್ಾನೆಗಳ ತ್ಯಾಜ್ಯ ವಸ್ತುಗಳು, ಮೋಟಾರು, ಕಾರುಗಳು ಉಗುಳುವ ಹೊಗೆ, ಪ್ಲಾಸ್ಟಿಕ್ ಬಳಕೆ, ಗಿಡ ಮರಗಳು ಕಡಿಯುವಿಕೆ, ಅರಣ್ಯ ನಾಶ ಹೀಗೆ ಹತ್ತು ಹಲವು ಮಾನವನ ದುರಾಸೆಯ ಫಲವಾಗಿ ಇಂದು ಪರಿಸರ ನಾಶವಾಗುತ್ತಿದ್ದು, ಉಸಿರಾಡಲು ಸಹ ಸ್ವಚ್ಛವಾದ ವಾತಾವರಣದ ಕೊರತೆಯುಂಟಾಗುತ್ತಿದೆ. ಶಿವಾಜಿ ಅವರ ಗಿಡ ನೆಡುವಿಕೆ ಕಾರ್ಯವನ್ನು ಪ್ರತಿಯೊಬ್ಬರೂ ಅನುಸರಿಸಿದ್ದೆಯಾದರೇ ಸ್ಪಲ್ಪ ಪ್ರಮಾಣದಲ್ಲಾದರೂ ಪರಿಸರ ಸಂರಕ್ಷಿಸುವ ಕಾರ್ಯಕ್ಕೆ ನಾವುಗಳು ಕೈ ಜೋಡಿಸಿದಂತಾಗುತ್ತದೆ.
ಅದರಂತೆ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಅದೆಷ್ಟೋ ಹಳ್ಳಿಗಳ ನೀರಿನ ಸಮಸ್ಯೆ ಹೋಗಲಾಡಿಸಿ ಈಗ ಅಲ್ಲಿ ಹಸಿರು ವನ ನಿಮರ್ಿಸಿದ್ದಾರೆ. ಪರಿಣಾಮ ಬೇಸಿಗೆಯ ದಿನಗಳಲ್ಲಿಯೂ ಆ ಹಳ್ಳಿಗಳ ಕೆರೆ, ಬಾವಿಗಳು ನೀರಿನಿಂದ ತುಂಬಿದ್ದು ಕಂಡು ಬರುತ್ತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಐದು ವರ್ಷಕ್ಕೊಂದರಂತೆ ಒಂದು ಹಳ್ಳಿಯನ್ನು ಪಡೆದು, ಅದನ್ನು ಅಭಿವೃದ್ಧಿ ಮಾಡುವ ಸಂಕಲ್ಪ ಶಿವಾಜಿ ಕಾಗಣೀಕರ ಅವರದ್ದು. ಮೂವತ್ತು ಸಾವಿರಕ್ಕೂ ಹೆಚ್ಚು ಗೋಬರ್ ಗ್ಯಾಸ್ ನಿಮರ್ಿಸಿ ಹೊಗೆ ಮುಕ್ತ ಗ್ರಾಮವನ್ನಾಗಿಸಲು ನಾಂದಿ ಹಾಡಿದ್ದಾರೆ. ಅದರಂತೆ ಅಂದು ಅವರು ನೆಟ್ಟಿರುವ ಹತ್ತು ಹಲವು ಬಗೆಯ ಗಿಡಗಳು ಇಂದು ಹಣ್ಣು ಹಂಪಲಗಳನ್ನು ನೀಡುತ್ತಿದ್ದು, ಇದರಿಂದ ಅಲ್ಲಲ್ಲಿ ಉದ್ಯೋಗ ಸೃಷ್ಠಿಯೂ ಆಗಿದೆ. ಬೆಳಗಾವಿ ಹಳ್ಳಿಗಳ ಏಳಿಗೆ, ಸ್ತ್ರೀ ಶಕ್ತಿ ಗುಂಪುಗಳ ಸಶಕ್ತಿಕರಣ, ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಇದಲ್ಲವೇ ನಿಜವಾದ ಸಾಧನೆ.