`ಸಂಘೌ ಶಕ್ತಿ ಕಲಿಯುಗೇ'
-ಡಾ| ವೈ.ಎಂ.ಯಾಕೊಳ್ಳಿ
ಬೆಳಗಾವಿ
`ಸಂಘೌ ಶಕ್ತಿ ಕಲಿಯುಗೇ' ಎಂಬ ಮಾತು ಪ್ರಸಿದ್ಧವಾದುದು. ಒಂದೊಂದು ಯುಗಕ್ಕೆ ಒಂದೊಂದು ತತ್ವ ಯಶಸ್ಸಿನತ್ತ ಕೊಂಡೊಯ್ದಿತ್ತು. ಭಕ್ತಿ ಶ್ರದ್ದೆಗಳು ತ್ರೇತಾಯುಗದಲ್ಲಿ, ಧರ್ಮ-ವೀರಗಳು ದ್ವಾಪರಯುಗದಲ್ಲಿ ಹಾಗೆಯೇ ಸಂಘ-ಸಂಘಟನೆಗಳು ಕಲಿಯುಗದಲ್ಲಿ ಗೆಲ್ಲಿಸುತ್ತದೆ ಎಂಬುದು ಅನುಭವಿಗಳ ಮಾತು. 'ಘಜಟಿ ಥಿಠಣ ಜಠಿಜಡಿಚಿಣಜ ಥಿಠಣ ತಿಟಟ ಜಜಣಡಿಠಥಿ ತಿಜಟಿ ಥಿಠಣ ಣಟಿಣ ಥಿಠಣ ತಿಟಟ ಣಛಿಛಿಜಜ' ಎಂದು ಇಂಗ್ಲೀಷನ ಪ್ರಸಿದ್ಧ ಸೂಕ್ತಿ ಸಂಘಟಿತರಾಗುವುದರ ಮಹತ್ವ ಹೇಳಿದೆ.
ಒಬ್ಬ ವೃದ್ಧ ತಂದೆ ಸಾಯುವ ಸ್ಥಿತಿಯಲ್ಲಿದ್ದ. ಅವನ ಏಳು ಜನ ಮಕ್ಕಳು ತಂದೆ ಸಾಯುವ ಸ್ಥಿತಿಯಲ್ಲಿದ್ದರೂ ಅವನ ಬಗ್ಗೆ ದುಃಖತರಾಗಲಿಲ್ಲ. ತಮಗೆ ಯಾವುದೇ ಆಸ್ತಿಯನ್ನು ಮಾಡಿಲ್ಲವೆಂದು ಅವರು ತಂದೆಯ ಬಗ್ಗೆ ಕೋಪಗೊಂಡಿದ್ದರು. ಆ ವೃದ್ಧನಿಗೆ ತನ್ನದೆನ್ನುವ ಭೂಮಿಯಾಗಲೀ, ಮನೆಯಾಗಲೀ ಇರಲಿಲ್ಲ. ತನ್ನ ಮಕ್ಕಳ ಮುಖದಲ್ಲಿ ಮುಸುಕಿರುವ ಬೇಸರವನ್ನು ಕಂಡು ವೃದ್ಧ ತಂದೆ ಅವರನ್ನೆಲ್ಲ ತನ್ನ ಬಳಿ ಕರೆದ. ಆತ ಪ್ರತಿಯೊಬ್ಬರಿಗೂ ಒಂದೊಂದು ಕಡ್ಡಿ ಕೊಟ್ಟ ಚೂರು ಚೂರು ಮಾಡುವಂತೆ ಹೇಳಿದ. ಅವರು ಮುರಿದರು. ಕೊನೆಗೆ ಅವರಿಗೆ ಕಡ್ಡಿಯ ದೊಡ್ಡ ಕಟ್ಟನ್ನು ನೀಡಿ ಅದನ್ನು ಮುರಿಯುವಂತೆ ಹೇಳಿದ. ಅವರು ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಅದನ್ನು ಮುರಿಯಲಾಗಲಿಲ್ಲ. ಆಗ ತಂದೆ ಹೇಳಿದ "ನೋಡಿ ಮಕ್ಕಳೇ ನಾನು ನಿಮಗೆ ಯಾವುದೇ ಆಸ್ತಿ ಮಾಡಿಲ್ಲವೆಂದು ದುಃಖಿತರಾಗಿದ್ದೀರಿ. ನಿಮಗೆ ನೀವೇ ಆಸ್ತಿ ಎಂಬುದು ಮರೆತಿದ್ದೀರಿ. ಅದರಲ್ಲಿಯೂ ನೀವು ಏಳು ಜನ ಕೂಡಿ ಇದ್ದರಂತೂ ಈ ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನು ನಾಶ ಮಾಡಲಾರದು. ಒಗ್ಗಟ್ಟಾಗಿ ಸಂಘಟಿತರಾಗಿ ಬಾಳಿರಿ". ಯಶಸ್ಸು ನಿಮಗೆ ಸಿಗುತ್ತದೆ. ಎಂದು ಹೇಳಿ ಕಣ್ಮುಚ್ಚಿದ. ಆ ಮಕ್ಕಳು ಸಂಘಟಿತರಾಗುವದರ ಮಹತ್ವ ಅರಿತವರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನೇ ಗಮನಿಸಿ. "ಎಂದೂ ಸೂರ್ಯ ಮುಳುಗದ ಸಾಮ್ರಾಜ್ಯವೆಂದು" ಹೆಸರಾಗಿದ್ದ ಬ್ರಿಟೀಷರ ಬಲಾಢ್ಯ ಶಕ್ತಿಯನ್ನು ಗಾಂಧೀಜಿಯವರು `ಸಂಘಟನೆ' ಎಂಬ ಶಕ್ತಿಯಿಂದ ಮುರಿದರು. ನಾವು ಸಂಘಟಿತರಾಗಿ ಹೋರಾಡದೆ ಇದ್ದರೆ ನಮ್ಮ ಜಯ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದಲೇ ಭಗವಾನ್ ಬುದ್ಧದೇವನಂಥವರು `ಸಂಘಂ ಶರಣಂ ಗಚ್ಛಾಮಿ' ಎಂದರು.
ಇಂದು ಸಂಘಟನೆಯ ಕಾಲ. ದಿನವೂ ಹೊಸ ಹೊಸ ಸಂಘಟನೆಗಳು ಹುಟ್ಟುತ್ತಿವೆ. ದುದರ್ೈವದ ಮಾತೆಂದರೆ ಹುಟ್ಟಿದ ಎಷ್ಟೋ ಸಂಘಟನೆಗಳು ಹುಟ್ಟಿದಷ್ಟೇ ವೇಗವಾಗಿ ಸಾಯುತ್ತವೆ. ಅದಕ್ಕೆ ಕಾರಣ ಸರಿಯಾದ ನಾಯಕತ್ವದ ಕೊರತೆ ಎನ್ನುವದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಸಂಘಟನೆಯ ಯಶಸ್ಸು ನಿಂತಿರುವುದು ಸ್ವಾರ್ಥತ್ಯಾಗದ ಮೇಲೆ. ಅಂದು ಮಹಾತ್ಮಾ ಗಾಂಧೀಜಿ ಅಧಿಕಾರ, ಹಣ ಅಂತಸ್ತು ಬಯಸದೆ ಹೋರಾಡಿದುದರ ಫಲ ಸ್ವಾತಂತ್ರ್ಯ ಬರುವುದು ಸಾಧ್ಯವಾಯಿತು. ಇಂದು ಬೇರೆ ಬೇರೆ ಆಸಕ್ತಿ, ಕ್ಷಣಿಕ ಲಾಭದಂತಹ ಉದಾತ್ತ ರಹಿತ ಗುರಿ ಇಟ್ಟುಕೊಂಡು ಸಂಘಟನೆಗಳು ಸೃಷ್ಟಿಯಾಗುತ್ತಿವೆ. ಹಾಗೆಯೇ ಹುಟ್ಟಿದ ಕೆಲವೇ ದಿನದಲ್ಲಿ ಸಾಯುತ್ತಿವೆ. ಆದ್ದರಿಂದ ಸಂಘಟಿತರಾಗುವವರು ತಮ್ಮ ಉದ್ದೇಶಕ್ಕೆ, ಪಾವಿತ್ರ್ಯಕ್ಕೆ ಮೊದಲು ಬದ್ಧರಾಗಬೇಕು. ನಮ್ಮ ಹಳ್ಳಿಯ ಜನ `ಕೆಟ್ಟು ಕೂಡಬೇಕು ಕೂಡಿ ಕೆಡಬಾರದು' ಎನ್ನುತ್ತಾರೆ. ಈ ಮಾತಿನ ಅರ್ಥ ಸಂಘಟನೆಯನ್ನು ಮುರಿಯುವ ಕೆಲಸ ಮಾಡಬಾರದು ಎಂದು.
ಮನುಷ್ಯ ಸಂಘ ಜೀವಿ. ಅವನಿಗೆ ಒಬ್ಬನೆ ಇರುವದು ಇಷ್ಟವಿಲ್ಲ. ಹಾಗಾಗಿ ಸದಾ ಗುಂಪಿನಲ್ಲಿರಲು ಬಯಸುತ್ತಾನೆ. ಗುಂಪುಗೂಡುವುದು ಸಂಘಟನೆಯ ಮೊದಲ ಲಕ್ಷಣ. ಒಂಟಿತನದಲ್ಲಿ ಬದುಕುವದನ್ನು ಕವಿಗಳು ಒಪ್ಪುವದಿಲ್ಲ. ಕವಿ ಬೇಂದ್ರೆ 'ಮಾಡದಿರು ಬಾಳನ್ನು ಬೆಳೆಯಂತೆ. ಕೂಡಿರಲಿ ಬಾಳು ಇಡಿಗಾಳಿನಂತೆ' ಎಂದರು. ಡಿ.ವಿ.ಜಿ. ಯವರು.
ಒಬ್ಬನುಣ್ಣುವೂಟದಲಿ ಸವಿಯಿಲ್ಲ ಸೊಗಸಿಲ್ಲ
ಇಬ್ಬರಾಗುವೆನೆಂದನಂತೆ ಪರಬೊಮ್ಮಂ
ಹೆಬ್ಬದುಕ್ಕನೊಂಟಿತನದೊಳದೇನು ಬದುಕುವೆಯೋ
ತಬ್ಬಿಕೊಳ್ಳೊ ವಿಶ್ವವನು ಮಂಕುತಿಮ್ಮ
ಎಂದರು. ಸಂಘಟನೆಯ ಶಕ್ತಿ ಅರಿತ ಬಸವಣ್ಣ `ಅನುಭವ ಮಂಟಪ' ಕಟ್ಟಿದರು, ತನ್ನಂತೆಯೇ ವಿಚಾರಮಾಡುವ ಸರ್ವರನ್ನು ಸಂಘಟನೆ ಮಾಡಿದರು. ನಾಡಿನ ಎಲ್ಲ ಕಡೆಯಿಂದ ಸೇರಿದ ಜನ ಕೂಡಿ ಸಮಾಜ ಚಿಂತನೆ ಮಾಡಿದರು.
ಕೂಡಿದರು ಹುರುಪಿನಲಿ ನಾಡಬಲ್ಲಿದರೆಲ್ಲ
ಸೂಡ ಕಟ್ಟಿದರು ಶಿವನುಡಿಯ, ಕಾಯಕದ
ಗೂಡಾತು ಲೋಕ ಜನ ಹಿಗ್ಗಿ
ಎಂದು ಜನಪದ ಕವಿ ಹಾಡುತ್ತಾನೆ. ಅವರು ಕೂಡಿದರೆಂದೇ ವಚನ ಸಾಹಿತ್ಯದ ಶಿವುಡು (ಸೂಡು) ಕಟ್ಟುವುದು, ಒಂದು ಕಾಯಕದ ಗೂಡು ಕಟ್ಟುವದೂ ಸಾಧ್ಯವಾಯಿತು.
ಸಂಘಟನೆ ಎಂದರೆ ಸುಮ್ಮನೆ ಒಂದುಗೂಡುವದಲ್ಲ. ಅಲ್ಲೊಂದು ಶಿಸ್ತು ಇರುತ್ತದೆ. ಗುರಿಯೊಂದನ್ನು ನೆರೆ ನಂಬಿ ಹೋರಾಡುವ ಧಾರೆ ಇರುತ್ತದೆ. ಉದ್ದೇಶ ರಹಿತ ಒಂದುಗೂಡುವಿಕೆ ಸಂಘಟನೆಯಾಗಲಾರದು. ಏಕಾಭಿಪ್ರಾಯವಿಲ್ಲದ. ಒಂದೇ ಗುರಿಯಲ್ಲದ ಗುಂಪು ಗೂಡುವಿಕೆಯೂ ಸಂಘಟನೆ ಆಗಲಾರದು. ಶರಣರು ಹೇಳುವಂತೆ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಅದರಿಚ್ಛೆಯನರಿದು ಹೊಡೆಯದಿದ್ದರೆ
ಅದರಚ್ಚು ಮುರಿದಿತ್ತು ಗುಹೇಶ್ವರಾ
ಸಮವಿಲ್ಲದ, ಒಂದು ಗುರಿಯಲ್ಲದ ಸಂಘಟನೆ ನಾಶವಾಗುತ್ತದೆ ಎನ್ನುವದು ಇಲ್ಲ ಸೂಚಿತ ಪಂಚೇಂದ್ರಿಯಗಳ ಹೊಂದಾಣಿಕೆಯಿಲ್ಲದ ದೇಹವೇ ಬೀಳುವಂತಾದರೆ, ಇನ್ನು ನೂರಾರು ಜನ, ಸಾವಿರಾರು ಜನ ಸೇರಿದ ಸಂಘಟನೆಯಲ್ಲಿ `ಇಚ್ಚೆಯ' ಅರಿತು ನಡೆಯದಿದ್ದರೆ ಸಂಘಟನೆ ಹೇಗೆ ಉಳಿದೀತು? ಇದನ್ನು ಅರಿತರೆ ಸಂಘಟನೆ ಜಯಶಾಲಿಯಾಗುವುದು ಸಾಧ್ಯ.