ಕುಷ್ಟಗಿ

ವಿಶ್ವಕರ್ಮರು ಸಮಾಜದ ಒಂದು ಬಹುಮುಖ್ಯ ಅಂಗ: ಗುರಪ್ಪ ಬಡಿಗೇರ

ವಿಶ್ವಕರ್ಮರು ಸಮಾಜದ ಒಂದು ಬಹುಮುಖ್ಯ ಅಂಗ: ಗುರಪ್ಪ ಬಡಿಗೇರ

ಕುಷ್ಟಗಿ: ಕರಕುಶಲತೆಯೇ ವಿಶ್ವಕರ್ಮರ ಜೀವನಾಡಿ. ತಮ್ಮ ಕೌಶಲ್ಯದಿಂದಲೆ ಜೀವನೋಪಾಯ ಕಂಡುಕೊಳ್ಳುವ ವಿಶ್ವಕರ್ಮರು ಸಮಾಜದ ಒಂದು ಬಹುಮುಖ್ಯ ಅಂಗವೆಂದರೆ ತಪ್ಪಿಲ್ಲ ಎಂದು ವಿಶ್ವಕರ್ಮ ಸಮಾಜದ ಅಧ್ಯಕ್ಷ ಗುರ​‍್ಪ ಬಡಿಗೇರ ಹೇಳಿದರು.  

ವಿಶ್ವಕರ್ಮ ಜಯಂತಿಯನ್ನು ಆಚರಣೆ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಶ್ರಿ ವಿರಾಟ ವಿಶ್ವಕರ್ಮ ವೃತ್ತದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಸಮಾಜ ಬಾಂಧವರಿಂದ ಪುಷ್ಪಾರ್ಚನೆ ನೆರವೇರಿಸಿ ನಂತರ ಮಾತನಾಡಿ ವಿಶ್ವಕರ್ಮರು ತಮ್ಮ ಕಾಯಕದ ಮೂಲಕ ಇಡಿ ನಾಡಿಗೆ ಕೊಡುಗೆ ನೀಡಿದ್ದಾರೆ. ದೇವರ ಮೂರ್ತಿಗಳ ಕೆತ್ತನೆ, ಸುಂದರವಾದ ವಿಗ್ರಹಗಳು,ಅಮರಶಿಲ್ಪಿ ಜಕಣಾಚಾರಿ ಯವರ ಶಿಲ್ಪಕಲೆಗಳು ಮನೆ ನಿರ್ಮಾಣ, ಪೀಠೋಪಕರಣಗಳು, ಕೃಷಿ ಸಲಕರಣೆಗಳು ಹೀಗೆ ಹತ್ತು ಹಲವು ಭಾಗಗಳಲ್ಲಿ ವಿಶ್ವಕರ್ಮರ ಕೊಡುಗೆ ಇದ್ದೆ ಇರುತ್ತದೆ.   

ನಂತರ ಮುಖಂಡ ರಾಮಣ್ಣ ಬಡಿಗೇರ ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯವರು ಇಡೀ ನಾಡಿಗೆ ಶಿಲ್ಪಕಲೆಯನ್ನು ಪಾಶ್ಚಾತ್ಯ ದೇಶದವರು ಸಹ ಬಂದು ನೋಡಿ ಬೆರಗಾಗುವಂತೆ ನಿರ್ಮಿಸಿದ್ದಾರೆ. ಯಾವುದೇ ತಂತ್ರಜ್ಞಾನದ ಮೊರೆಹೋಗದೇ ವಾಸ್ತುಶಿಲ್ಪವನ್ನು ಕಟ್ಟಿಕೊಟ್ಟಿರುವುದು ಇತಿಹಾಸದಲ್ಲಿ ಅಚ್ಚಳಿಯದೆ ನೂರಾರು ವರ್ಷಗಳಿಂದ ನಮ್ಮ ಕಣ್ಣ ಮುಂದಿವೆ. ಇಂತಹ ಕೊಡುಗೆ ನೀಡಿದ ವಿಶ್ವಕರ್ಮ ಸಮಾಜವು ಅತ್ಯಂತ ಹಿಂದುಳಿದಿದ್ದು, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಿದೆ. ಸಮಾಜವು ಒಗ್ಗಟ್ಟನಿಂದ ಕೂಡಿದಾಗ ಮಾತ್ರ ಮುಂದೆ ಬರಲು ಸಾಧ್ಯ ಎಂದರು.    

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶರಣಪ್ಪ ಬುಡುಕುಂಟಿ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಮುಖಂಡರಾದ ರಾಮಣ್ಣ ಬಡಿಗೇರ್ ಬ್ಯಾಲಿಹಾಳ್, ಕೃಷ್ಣಪ್ಪ ಪತ್ತಾರ, ವಾಸಪ್ಪ ಪತ್ತಾರ, ಮೌನೇಶ ದೇವರಗುಡಿ, ಶಿವಕುಮಾರ ಬಡಿಗೇರ, ಅನೀಲ ಕಮ್ಮಾರ, ಮಹೇಶ ವಜ್ರಬಂಡಿ, ಲಕ್ಷ್ಮಣ ಬಡಿಗೇರ, ಮಹಾಂತೇಶ ಬಡಿಗೇರ, ಕಾಳಪ್ಪ ಬಡಿಗೇರ, ಕೃಷ್ಣ ಮೂರ್ತಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ