"ಐ ಕ್ಯಾನ ಲೂಸ ಎ ಫ್ರೇಂಡ ಬಟ್ ನಾಟ್........."
-ಗುಂಡೇನಟ್ಟಿ ಮಧುಕರ
ಪತ್ರಕರ್ತರು, ಲೇಖಕರು
ನಾನು ಕಚೇರಿಗೆ ಹೋಗಬೇಕಾದ್ರೆ ಬಸ್ಸಿಗೇ ಹೋಗಬೇಕು, ಇಲ್ಲವೆ ಯಾರದ್ದಾದರೂ ದ್ವಿಚಕ್ರವಾಹನಗಳ ಹಿಂದಿನ ಸೀಟಿನಲ್ಲಿ ಹಿಂದನ ರಾಜನಾಗಿ ಅಂದರೆ ಎರಡು ಕೈಗಳನ್ನು ತೊಡೆಗಳ ಮೇಲೆ ಇಟ್ಟುಕೊಂಡು, ರಾಜಠೀವಿಯಲ್ಲಿ ರಾಜ್ಯವನ್ನು ವೀಕ್ಷಿಸಲು ಹೊರಟ ರಾಜನ ಪೋಜಿನಲ್ಲಿ ಹೋಗುತ್ತೇನೆ. ಯಾಕೆಂದರೆ ನನಗೆ ಗಾಡಿ ನಡಿಸಲು ಬರುವದಿಲ್ಲವೆಂದು ಬೇರೆ ಹೇಳಬೇಕಾಗಿಲ್ಲವಲ್ಲ. ಆದರೆ ನನಗೆ ಪ್ರತಿ ದಿನವೂ ಗೊತ್ತಿರುವ ಗಾಡಿಯವರೆಲ್ಲಿ ಸಿಗಬೇಕು ಹೆಚ್ಚಾಗಿ ಬಸ್ಸನ್ನೇ ಅವಲಂಬಿಸಬೇಕಾಗುತ್ತಿತ್ತು. ಬಸ್ಸನ್ನು ಅವಲಂಬಿಸಿದವರ ನೋವುಗಳನ್ನು, ದಿನಾಲು ಬಸ್ಸಿನಲ್ಲಿ ಪ್ರಯಾಣಿಸುವವರೆ ಬಲ್ಲರು. ಸ್ವತಃ ಸಾಯಿದ ಹೊರತು ಸ್ವರ್ಗದ ಸುಖ ತಿಳಿಯಲಾರದು ಅನ್ನುತ್ತಾರಲ್ಲ ಹಾಗೆ. ಬೇರೆಯವರು ಸಾಯುವದರಿಂದ ನಮಗೆ ಸ್ವರ್ಗದ ಅನಭವ ಸಿಗಲಾರದು. ಹಾಗೆ ಬಸ್ಸಿನ ತಿರುಗಾಟದ ನೋವು, ಸಂಕಟಗಳನ್ನು ತಿಳಿಯುವುದು ಸ್ವತಃ ಬಸ್ಸಿನಲ್ಲಿ ತಿರುಗಾಟದಿಂದ ಮಾತ್ರ ಸಾಧ್ಯ..
ಹಿರಿಯರು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂದು ಹೇಳಿದರೇನೊ ನಿಜ, ಆದರೆ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದವರು ತಮ್ಮ ಕಾಲುಗಳ ಮೇಲೆ ನಿಲ್ಲುವುದು ಸಾಧ್ಯವೇ ಇಲ್ಲ. ಬದಲಾಗಿ ಯಾರದ್ದಾದರೂ ಕಾಲ ಮೇಲೆಯೋ, ಬ್ಯಾಗಿನ ಮೇಲೆಯೇ ನಿಂತೇ ಪ್ರಯಾಣ ಮಾಡಬೇಕಾಗುತ್ತದೆ. ದಾರಿ ನೋಡಿ ನೋಡಿ ದಣಿದ ದೇಹ ದೂರದದಲ್ಲಿ ಬರುತ್ತಿರುವ ಬಸ್ಸನ್ನು ನೋಡಿದಾಗ ಅರ್ಧ ದಣಿವಾರಿಹೋಗುತ್ತದೆ. ಆದರೆ ಇನ್ನು ಬಂದು ಎದರುನಲ್ಲಿಯೇ ಪ್ರತ್ಯಕ್ಷವಾಗಿ ನಿಂತಾಗಿನ ಪುಲಕಿತವನ್ನು ನಾನೆಂತು ಹೇಳಲಿ, ತಪ್ಪಸ್ಸು ಮಾಡಲು ಕುಳಿತಾಗ ತಪಸ್ಸು ಭಂಗ ತರಲು ಬಂದು ನಿಲ್ಲಿವ, ಮೇನಕೆಯನೋ, ರಂಭೆಯನ್ನೋ ಕಂಡಷ್ಟು ಸಂತೋಷದಿಂದ ಪುಲಕಿತಗೊಳ್ಳುತ್ತೆನೆಂದು ಹೇಳಬಹುದು. ಕಾದು ಕಾದು ಕೈಹಿಡಿದ ಮಡದಿಯ ಸುಖವೇ ಬೇರೆ ಎಂದೆನ್ನುತ್ತಾರೆ ಅದಕ್ಕಿಂತಲೂ ಹೆಚ್ಚಿನ ಸುಖ ಸಿಗುವುದು. ಕಾದು ಕಾದು ಸಿಕ್ಕ ಬಸ್ಸನ್ನು ಹಿಡಿದಾಗ! ಅದರಲ್ಲೀಯೂ ಬಸ್ಸಿನಲ್ಲಿ ಸೀಟು ಸಿಕ್ಕಾಗ ಸಿಗುವ ಸುಖದ ಪರಿಯನನು ನಾನೆಂತು ಬಣ್ಣಿಸಲಿ. ಸ್ವರ್ಗ ಸುಖವೆಂದರೆ ನೀವು ಯಾವಾಗ್ಯೆ ಸ್ವರ್ಗಕ್ಕೆ ಹೋಗಿದ್ದಿರಿ ಎಂದು ಕೇಳದೆ ಇರಲಾರಿರಿ. ಇರಲಿ, ಅದೇನೋ ಅನ್ನುತ್ತಾರಲ್ಲ ಬಸ್ಸಿನಲ್ಲಿ ತಿರುಗುವವರ ನೋವು ಬೈಕಿನಲ್ಲಿ ತಿರುಗುವವರಿಗೇನು ಗೊತ್ತು ಎಂದು.
'ಒಂದೇ ದಿನದಲ್ಲಿ ನಿನ್ನ ಪ್ಯಾಂಟು ಶಟರ್ು ಅದು ಹೇಗೆ ಇಷ್ಟೊಂದು ಕೊಳೆಯಾಗುತ್ತವೆ?' ಎಂಬ ಪ್ರಶ್ನೆ ಕೇಳುವುದರ ಹಿಂದೆಯೇ ಮತ್ತೊಂದು ಪ್ರಶ್ನೆ- 'ಕಿಸೆಗಳ್ಳರು ಇಷ್ಟೊಂದು ಬಾರಿ ಅದು
ಹೇಗೆ ನಿನ್ನ ಕಿಸೆಯನ್ನು ಕತ್ತರಿಸುತ್ತಾರೆ?' ಎಂಬಂತಹ ಹಲವಾರು ಹುಚ್ಚು ಪ್ರಶ್ನೆಗಳನ್ನು ಹಲವು ಬಾಯಿಗಳು ನನ್ನನ್ನು ಕೇಳಿವೆ. ನಾನು ಮೊದಲು ನಿರ್ಧರಿಸುವುದು ಈ ಪ್ರಶ್ನೆ ಕೇಳುವವರು ದ್ವಿಚಕ್ರವಾಹನ ಹೊಂದಿರಲೇಬೇಕು ಇಲ್ಲವೆ ಕಾರುಗಳ ಮಾಲಿಕರಿರಲೇಬೇಕು. ಬಸ್ಸಿನಲ್ಲಿ ತಿರುಗಾಡುವವರು ಈ ಪ್ರಶ್ನೆಯನ್ನು ಕೇಳಲು ಸಾಧ್ಯವೇ ಇಲ್ಲವೆಂಬುದು ನನ್ನ ಅಭಿಮತ. ಬಸ್ಸಿನಲ್ಲಿ ತಿರುಗಾಡುವವರು ಹಂಚಿಕೊಂಡು ತಿನ್ನುವವರೆಂದು ಹೇಳಬಹುದು. ಜೇಬು ಅಥವಾ ಬ್ಯಾಗ ತುಂಬ ಹಣವನ್ನಿಟ್ಟುಕೊಂಡು ಜೇಬುಗಳ್ಳರಿಗೆ ಹಂಚಿ ಬರುತ್ತಾರೆ! ಬಸ್ಸಿನಲ್ಲಿ ಬರುವ ಬಿಕ್ಷುಕರಿಗೆ ನೀಡುವ ಅವಕಾಶವೂ ಇಲ್ಲಿ ಲಭ್ಯ. ಒಟ್ಟಿನಲ್ಲಿ ಹಂಚಿ ತಿನ್ನುವ ಸ್ವಭಾವದವರು. ಅದಕ್ಕೆ ಅವರು ಜೀವನಪೂತರ್ಿ ಬಸ್ಸಿನಲ್ಲಿಯೇ ತಿರುಗಾಡುತ್ತಿರುತ್ತಾರೆ!
ಲೋಹ ಚುಂಬಕಕ್ಕೆ ಅಂಟಿಕೊಂಡ ಪಿನ್ನುಗಳಂತೆ ಬಸ್ಸಿಗೆ ಅಂಟಿಕೊಂಡು ಹೋಗುತ್ತಿರುವ ದೃಶ್ಯ ಸವರ್ೆಸಾಮಾನ್ಯ. ಈ ರೀತಿ ಲೋಹಚುಂಬಕ್ಕೆ ಅಂಟಿದ ಪಿನ್ನಾಗುವ ಪ್ರಸಂಗ ಹಲವಾರು ಬಾರಿ ನನ್ನ ಪಾಲಿಗೂ ಬಂದಿದೆ. ಹೀಗಾಗಿ ಅನಾಯಾಸವಾಗಿ ಬಸ್ಸು ಹತ್ತುವ ಸಂದರ್ಭ ಒದಿಗಿ ಬಂದಾಗ ನಾನೆಂದೂ ಕಳೆದುಕೊಂಡವನಲ್ಲ.
ನಾನು ಲೋಕದರ್ಶನ ದಿನಪತ್ರಿಕೆಯಲ್ಲಿ ಕೆಲಸ ಮಾಡುತಿದ್ದ ಸಂದರ್ಭ. ನನಗಲ್ಲಿ ಪತ್ರಕರ್ತ ಪಲ್ಲಣ್ಣನ ವಿಶೇಷ ಸ್ನೇಹ ಉಂಟಾಗಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಅವನ ದ್ವಿಚರ್ಕ ವಾಹನ. ಅಲ್ಲದೆ ಅವನು ತನ್ನ ಮನೆಗೆ ಹೋಗಬೇಕಾದರೆ ನನ್ನ ಮನೆಯ ಮಾರ್ಗವಾಗಿಯೇ ಹೋಗಬೇಕಾಗುತ್ತಿತ್ತು. ಅಲ್ಲದೇ ನನ್ನ ಮತ್ತು ಅವನ ಮೆಚ್ಚಿನ ಲೇಖಕ ಬೀಚಿಯಾಗಿದ್ದರು. ಬೀಚಿ ಬರೆದ ಕಾದಂಬರಿಗಳ ಬಗೆಗೆ, ನಗೆಹನಿಗಳ ಬಗೆಗೆ, ನಗೆಪ್ರಸಂಗಗಳ ಕುರಿತು ಮೆಲಕು ಹಾಕುವದೂ ನಮ್ಮ ಸ್ನೇಹಕ್ಕೆ ಪೂರಕವಾಗಿತ್ತು. ಹಾಸ್ಯ ಲೇಖಕರಲ್ಲಿ ಅತಿಯಾಗಿ ಮೆಚ್ಚಿಕೊಳ್ಳುತಿದ್ದುದು ಬಳ್ಳಾರಿ ಬೀಚಿ ಕೃತಿಗಳನ್ನು. ನಾನೂ ಕೂಡ ನನ್ನ ಕಾಲೇಜಿನ ದಿನಗಳಲ್ಲಿ ಬೀಚಿಯ ಎಲ್ಲ ಕೃತಿಗಳನ್ನು ಓದಿದ್ದಲ್ಲದೆ. ಬೀಚಿ ನುಡಿಮುತ್ತುಗಳನ್ನು ಪತ್ರಿಕೆಯೊಂದಕ್ಕೆ ಬರೆದು ಕಳುಹಿಸುತ್ತಿದ್ದೆ. ಅವು ಪ್ರಕಟಗೊಂಡಿದ್ದವು. ಇದರಿಂದ ಬೀಚಿ ಬರೆದ ಪ್ರತಿಯೊಂದು ಸಾಲು ಮನದಲ್ಲಿ ಉಳಿದಿದ್ದವು. ಹೀಗಾಗಿ ಇಬ್ಬರೇ ಕೂಡಿದ್ದಾಗ ಬೀಚಿ ಸಾಹಿತ್ಯ ಕುರಿತು ಮಾತನಾಡುವದರಲ್ಲಿಯೇ ಸಮಯ ತೆಗೆಯುತ್ತಿದ್ದೆವು. ಆವಾಗ್ಯೆ ಪಲ್ಲಣ್ಣ ಮೇಲಿಂದ ಮೇಲೆ ಹೇಳುತಿದ್ದುದು, ಬೀಚಿಯವರ "ಆಯ್ ಕ್ಯಾನ್ ಲೂಸ ಎ ಪ್ರೆಂಡ್, ಬಟ್ ನಾಟ್ ಎ ಜೋಕ್ ಎಂಬ ಮಾತು ಪಲ್ಲಣ್ಣನ ಬಾಯಿಂದ ಆಗಾಗ ಹೊರಬೀಳುತಿತ್ತು.
ಎಂದಿನಂತೆ, ಅಂದೂ ಕೂಡ ಪಲ್ಲಣ್ಣನ ಗಾಡಿಯ ಹಿಂದಿನ ಸೀಟಿನ ಮೇಲೆ ಕುಳಿತು ಹೊರಟಿದ್ದೆ, ಪಲ್ಲಣ್ಣನ ಉಪನ್ಯಾಸ ಆಲಿಸುತ್ತ ಗಾಡಿಯ ಹಿಂದಿನ ಸೀಟಾನಂದ ಅನುಭವಿಸುತ್ತಿದ್ದೆ. ದಾರಿಯಲ್ಲಿ ಏನೋ ಘಟಿಸಿದ್ದರಿಂದ ಜನರ ಗುಂಪು ಸೇರಿತ್ತು. ಸೇರೆದ್ದ ಎಲ್ಲರೂ ಮಾತನಾಡುತ್ತಿದ್ದುದರಿಂದ ಎಲ್ಲರ ಮಾತುಗಳೂ ಒಟ್ಟಾಗಿ ಕೂಡಿ ಬರುತ್ತಿದ್ದುದರಿಂದ 'ಗಿಲ್ ಬಿಲ್ಲ ಎಂದು ಯಾರಿಗೂ ತಿಳಿಯದ ಹೊಸ ಭಾಷೆಯೇ ಹೊರಬಿಳುತ್ತಲಿತ್ತು. ಪಲ್ಲಣ್ಣನ ಪತ್ರಕರ್ತ ಮನಸ್ಸು ಜಾಗೃತಗೊಂಡಿತ್ತು. ಓಡಿಹೋಗಿ ಗುಂಪಿನಲ್ಲಿ ಸೇರಿಕೊಂಡುಬಿಟ್ಟ. ಕೆಲ ಸಮಯ ಕಳೆಯಿತು. ಜನರ ಗುಂಪಿನಿಂದಾಗಿ ಸಂಚಾರ ಸ್ಥಗಿತಗೊಂಡಿತು. ಈ ಗದ್ದಲದಲ್ಲಿ ಪಲ್ಲಣ್ಣ ಎಷ್ಟು ಹುಡುಕಿದರೂ ಸಿಗಲೊಲ್ಲ. ನಾನು ಮನೆ ಸೇರುವುದಾದರೂ ಹೇಗೆಂದು ವಿಚಾರ ಮಾಡುತ್ತಿರುವಾಗ, ಮನೆಗೆ ಹೋಗಲು ಬೇಕಾಗಿರುವ ಬಸ್ಸು ನನ್ನ ಮುಂದೆಯೇ ಬಂದು ನಿಲ್ಲಬೇಕೆ? ಬಹಷಃ ನನ್ನ ಜೀವನದಲಿಯೇ ಇದೇ ಮೊದಲಬಾರಿ ಇರಬಹುದು. ಜೀವನದ ತುಂಬೆಲ್ಲ ಬಸ್ಸಿಗಾಗಿ ಓಡಿ ಓಡಿ ಸಾಕಾಗಿತ್ತು. ಪಲ್ಲಣ್ಣನನ್ನು ಅಲ್ಲಿಯೇ ಬಿಟ್ಟು, ನಿಂತಿದ್ದ ಬಸ್ಸನ್ನೇರಿ ಬಿಟ್ಟಿದ್ದೆ. ಪಲ್ಲಣ್ಣನನ್ನು ಬಿಟ್ಟು ಬಸ್ಸನ್ನೇರಿ ಬಿಟ್ಟಿದ್ದರಿಂದ ನನ್ನ ಮನಸ್ಸೇಕೋ ಒಪ್ಪಿಕೊಳ್ಳಲಿಲ್ಲ, ಬೇಸರವಾಯಿತು. ಸೀಟು ಕಂಡೊಡನೆ ಹಾರಿ ಬಿಡುವ ರಾಜಕಾರಣಿಗಳಿಗಿಂತ ನಾನು ಕಡೆಯಾದನೆ? ಎಂದು ಮನಸ್ಸು ಹಳಹಳಿಸಿತು.
ಬಂದು ಮನೆ ತಲುಪಿ ಮುಂದೆ ತಾಸಿನ ನಂತರ ಪಲ್ಲಣ್ಣನ ಫೋನು ಬಂದಿತು. "ಅಲ್ಲಿ ಎಕ್ಸಿಡೆಂಟ್ ಆಗಿತ್ತಿರಿ ಒಬ್ಬಾಂವ ಸತ್ತಾನ್ರಿ. ನನಗೊಂದು ಒಳ್ಳೆ ಸುದ್ದಿಯಾಯಿತ್ರಿ. ಮತ್ತೆ ಪತ್ರಿಕಾ ಕಚೇರಿಗೆ ಹೋಗಿ ವರದಿ ಮಾಡಿ ಬಂದೆ. 'ಐ ಕ್ಯಾನ ಲೂಸ್ ಎ ಫ್ರೆಂಡ್, ಬಟ್ ನಾಟ ಎ ನ್ಯೂಸ್ ಎಂದು ಬೀಚಿ ಮಾತನ್ನೇ ಸೊಲ್ಪ ಬದಲಾವಣೆ ಮಾಡಿ ಹೇಳಿ ನಗಲು ಪ್ರಾರಂಭಿಸಿದ. ಬಸ್ಸ ಕಾಯುವುದರ ನೋವು ಗೊತ್ತಿದ್ದ ನಾನು ಪಲ್ಲಣ್ಣನನ್ನು ಬಿಟ್ಟು ಬಸ್ಸನ್ನೇರಿದ್ದೆ. ಪಲ್ಲಣ್ಣ ಮಾತಿನ ತಿರುಗು ಬಾಣವೆಂಬಂತೆ ನಾನು, "ಐ ಕ್ಯಾನ ಲೂಸ ಎ ಫ್ರೆಂಡ ಬಟ್ ನಾಟ್ ಎ ಬಸ್ ಎಂದು ಹೇಳಿದಾಗ. ಫೋನಿನಲ್ಲಿಯೇ ಮನಸಾರೆ ಇಬ್ಬರೂ ನಕ್ಕಿದ್ದೇವು.